
“ಬಲವಂತವಾಗಿ ರಾಜಿನಾಮೆ ಕೊಡಿಸಿದರು” – ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಗಂಭೀರ ಆರೋಪ
ಹುಬ್ಬಳ್ಳಿ: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ಬಸವರಾಜ ಹೊರಟ್ಟಿ ಅವರು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಸಿಎಂ ತಮ್ಮ ಮೇಲೆ ಒತ್ತಡ ಹೇರಿ ಬಲವಂತವಾಗಿ ರಾಜಿನಾಮೆ ಪಡೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ನನ್ನ ರಾಜಿನಾಮೆ ಬಗ್ಗೆ ಈಗಾಗಲೇ ಸಿಎಂ ಜೊತೆಗೆ ಮಾತನಾಡಿರುವೆ. 14 ರಂದು ರಾಜಿನಾಮೆ ಹೇಗೆ ಕೊಡಬೇಕು ಅಂತ ಸಿಎಂ ಜೊತೆಗೆ ಒಪ್ಪಂದ ಆಗಿತ್ತು. ಆದರೆ ಸಿಎಂ 7ನೇ ತಾರೀಖಿನಂದೇ ರಾಜಿನಾಮೆ ನೀಡಬೇಕು ಅಂತ ಒತ್ತಡ ಹಾಕಿದರು. ನಾನು 14ಕ್ಕೆ ರಾಜಿನಾಮೆ ನೀಡುವೆ ಅಂತ ಹೇಳಿದೆ. ಆದರೆ ಸಿಎಂ ಸಾಕಷ್ಟು ಒತ್ತಡ ಹಾಕಿದರು. ಅದಕ್ಕೆ ಬಲವಂತವಾಗಿ ರಾಜಿನಾಮೆ ನೀಡಿದೆಎಂದು ಹೊರಟ್ಟಿ ಹೇಳಿದರು.ಈ ಹಿಂದೆ ನಾನು ಆಸ್ಪತ್ರೆ ಬೆಡ್ ಮೇಲೆ ಇದ್ದಾಗಲೇ ಸಿಎಂ ಫೋನ್ ಮಾಡಿ ಸಾಕಷ್ಟು ಒತ್ತಾಯ ಹಾಕಿದರು ಎಂದು ಅವರು ತಿಳಿಸಿದರು.
ಹೊರಟ್ಟಿ ಅವರು ಇಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ ತಮ್ಮ ರಾಜೀನಾಮೆಯನ್ನು ಹೇಗೆ ಪಡೆಯಲಾಯಿತು ಎಂಬ ಬಗ್ಗೆ ವಿವರವಾಗಿ ಉಲ್ಲೇಖ ಮಾಡಿದ್ದಾರೆ. ರಾಜ್ಯ ಸರ್ಕಾರದ ನಡೆ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ನಾನು ಪರಿಸ್ಥಿತಿಗೆ ಒಳಗಾಗಿ ರಾಜಿನಾಮೆ ನೀಡಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.
1956 ರಿಂದ ಇಲ್ಲಿಯವರೆಗೆ ಯಾವುದೇ ಸಭಾಪತಿಯ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿಲ್ಲ. ಇದು ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಈ ರೀತಿಯ ವರ್ತನೆ ಆಗಿದೆ` ಎಂದು ಅವರು ಕಿಡಿಕಾರಿದರು.ಪಕ್ಷದ ವಿಚಾರದಲ್ಲಿ ಏನಾದರೂ ಘೋಷಣೆ ಮಾಡಬೇಕಾದರೆ ಪಕ್ಷ ಮಾಡಲಿ.ಆದರೆ ಸಭಾಪತಿ ಹುದ್ದೆಯನ್ನು ತಮ್ಮ ಲೆಟರ್ ಪ್ಯಾಡ್ ನಲ್ಲಿ ಘೋಷಣೆ ಮಾಡುತ್ತಾರೆ. ಇದು ತಪ್ಪು. ಈ ರೀತಿಯ ನಡೆ ಸರಿಯಲ್ಲ. ಇದು ಇಡೀ ದೇಶದಲ್ಲಿಯೇ ಮೊದಲು ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ನಾನು ರಾಜಿನಾಮೆ ಪತ್ರ ರೆಡಿ ಮಾಡಲು ಹೇಳಿಲ್ಲ. ಆದರೆ ನನ್ನ ಮುಂದೆ ಅವರೇ ರಾಜಿನಾಮೆ ಟೈಪ್ ಮಾಡಿ ತಂದು ಇಟ್ಟು ಸಹಿ ಮಾಡು ಅಂತ ಬಲವಂತ ಮಾಡಿದರು. ನಾನೇನು ತಪ್ಪು ಮಾಡಿದ್ದೇನೆ? ಭ್ರಷ್ಟಾಚಾರ ಮಾಡಿದ್ದೇನಾ? ಅವ್ಯವಹಾರ ಮಾಡಿದ್ದೇನಾ? ಅವಿಶ್ವಾಸ ಮಂಡನೆ ಮಾಡಲು ಅವರ ಹತ್ತಿರ ಏನು ವಿಷಯವೇ ಇಲ್ಲ ಎಂದು ಪ್ರಶ್ನಿಸಿದರು.
ಅವರಿಗೆ ನನ್ನ ಮೇಲೆ ನಂಬಿಕೆ ಇಲ್ಲ ಅಂದರೆ ಅಲ್ಲಿ ಇರೋದು ಸರಿಯಲ್ಲ ಅನಿಸಿತು. ಹೀಗಾಗಿ ನಾನು ಸಾಮಾನ್ಯ ಸದಸ್ಯನಾಗಿ ಸದನದಲ್ಲಿ ಭಾಗವಹಿಸುತ್ತೇನೆ` ಎಂದು ಹೇಳಿದರು.
ನಾನು ಸಿಎಂ ಮನೆಗೆ ಹೋಗಿದ್ದು ನಿಜ. ಆದರೆ ನಾನು ಹೋಗಬಾರದಿತ್ತು. ಹೋಗಿದ್ದು ನನ್ನ ತಪ್ಪು ಎಂದು ಅವರು ಹೇಳಿದರು.ಕಾಂಗ್ರೆಸ್ ನಲ್ಲಿ ಯಾರಿಗೂ ನನ್ನ ಮೇಲೆ ಅಪನಂಬಿಕೆ ಇಲ್ಲ. ಒಳ್ಳೆಯ ಅಭಿಪ್ರಾಯವಿದೆ` ಎಂದು ಹೊರಟ್ಟಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.
