
ತಿಪಟೂರು ಬ್ರೇಕಿಂಗ್: ಮೇವು ಬ್ಯಾಂಕ್, ವಿದ್ಯುತ್‌ಗಾಗಿ ಜಾನುವಾರುಗಳೊಂದಿಗೆ ರೈತರ ಜಾಥಾ..!
ತಿಪಟೂರು: ಕೃಷಿಗೆ ಸಮರ್ಪಕ ವಿದ್ಯುತ್ ಸರಬರಾಜು ಮತ್ತು ಜಾನುವಾರುಗಳಿಗೆ ಮೇವು ಬ್ಯಾಂಕ್ ಆರಂಭಿಸುವಂತೆ ಆಗ್ರಹಿಸಿ ರೈತರು ಗುರುವಾರ ಟ್ರ್ಯಾಕ್ಟರ್ ಹಾಗೂ ಜಾನುವಾರುಗಳೊಂದಿಗೆ ಬೃಹತ್ ಜಾಥಾ ನಡೆಸಿದರು.
ದೇವಸ್ಥಾನದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ
ನಗರದ ಕಲ್ಲೇಶ್ವರಸ್ವಾಮಿ ದೇವಸ್ಥಾನದಿಂದ ಆರಂಭವಾದ ಜಾಥಾ ದೊಡ್ಡಪೇಟೆ ಮಾರ್ಗವಾಗಿ ತಾಲ್ಲೂಕು ಆಡಳಿತ ಕಚೇರಿವರೆಗೆ ಸಾಗಿತು. ಜಾಥಾದಲ್ಲಿ ರೈತರು ಟ್ರ್ಯಾಕ್ಟರ್, ಎತ್ತು, ಹಸುಗಳನ್ನು ಕರೆತಂದು ತಮ್ಮ ಸಂಕಷ್ಟವನ್ನು ಸರ್ಕಾರಕ್ಕೆ ತೋರಿಸಿದರು.
ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತರು ರಸ್ತೆ ತಡೆ ನಡೆಸಿ ಕೃಷಿ ಚಟುವಟಿಕೆಗಳಿಗೆ ನಿರಂತರ ಹಾಗೂ ಸಮರ್ಪಕ ವಿದ್ಯುತ್ ಸರಬರಾಜು ಮಾಡುವಂತೆ ಒತ್ತಾಯಿಸಿದರು.

ಮಳೆಕೊರತೆಯಿಂದ ಈಗಾಗಲೇ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವು ದೊರೆಯುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡರು. ತಕ್ಷಣ ಮೇವು ಬ್ಯಾಂಕ್ ಸ್ಥಾಪಿಸಿ, ಜಾನುವಾರುಗಳಿಗೆ ಅಗತ್ಯ ಸೌಲಭ್ಯ ಒದಗಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಹಳ್ಳಿಕಾರ್ ಮಡೆನೂರು ವಿನಯ್ ಮಾತನಾಡಿ, “ಮಳೆ ಕೊರತೆಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಗಿ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆಗೆ ಹಿನ್ನಡೆಯಾಗಿದೆ. ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವು ಒದಗಿಸುವುದೂ ರೈತರಿಗೆ ಸವಾಲಾಗಿದೆ.
ರಾತ್ರಿ ವೇಳೆಯಲ್ಲಿ ವಿದ್ಯುತ್ ಸರಬರಾಜು ನಿರಂತರವಾಗಿ ರದ್ದು ಆಗುತ್ತಿದೆ. ಆಗಾಗ್ಗೆ ಸ್ಥಗಿತಗೊಳ್ಳುತ್ತಿರುವುದರಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಕೃಷಿ ಬಳಕೆ ಹಾಗೂ ತೋಟದ ಮನೆಗಳಿಗೆ ನಿಯಮಿತ ವಿದ್ಯುತ್ ಪೂರೈಸಬೇಕು” ಎಂದು ಒತ್ತಾಯಿಸಿದರು.
ಲೋಕೇಶ್ ರಂಗಾಪುರ ಮಾತನಾಡಿ, “ಎರಡು ದಿನಗಳೊಳಗೆ ಮೇವು ಬ್ಯಾಂಕ್ ಹಾಗೂ ಗೋಶಾಲೆ ತೆರೆಯಲು ಕ್ರಮ ಕೈಗೊಳ್ಳಬೇಕು. ಸ್ಪಂದಿಸದಿದ್ದರೆ ‘ಚಲೋ ವಿಧಾನಸೌಧ’ ಪಾದಯಾತ್ರೆ ಹಾಗೂ ಬೃಹತ್ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ” ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕೃಷ್ಣ ಸಿ. ರಂಗಸ್ವಾಮಿ, ಲೋಕೇಶ್, ಸಂದೀಪ್, ಗೋಪಿ, ತಿಲೋತ್ತಮ, ಚೇತನ್, ರವಿ ಸೇರಿದಂತೆ ನೂರಾರು ರೈತರು, ರೈತ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ರೈತ ಮುಖಂಡರು ತಿಳಿಸಿದರು.
