
ಕಾವೇರಿ ನೀರು ಬಿಡುಗಡೆ : ಸರ್ವ ಪಕ್ಷಗಳ ಸಭೆಯಲ್ಲಿ ಚರ್ಚೆ
ಬೆಂಗಳೂರು,ಜು.29: ನಮಗೆ ಕುಡಿಯಲು ನೀರಿಲ್ಲ,ಹೀಗಿರುವಾಗ ತಮಿಳುನಾಡಿಗೆ ನೀರು ಹರಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸರ್ವ ಪಕ್ಷ ಸಭೆ ಕರೆಯಲಿದ್ದಾರೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾವೇರಿ ನೀರು ನಿರ್ವಹಣಾ ಸಮಿತಿ ದಿನಕ್ಕೆ 3,500 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಲು ಶಿಫಾರಸು ಮಾಡಿದೆ. ನಮಗೆ ಕುಡಿಯಲು ನೀರಿಲ್ಲ,ತಮಿಳುನಾಡಿಗೆ ಕೊಡಿ ಎಂದರೆ ಹೇಗೆ? ಈ ಬಗ್ಗೆ ಸರ್ವಪಕ್ಷಗಳ ಸಭೆಯಲ್ಲಿ ಮುಖ್ಯಮಂತ್ರಿಗಳು ಚರ್ಚಿಸುತ್ತಾರೆ ಎಂದರು.
ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಸೋಮವಾರ ರಾಜ್ಯಕ್ಕೆ ಬರಲಿದ್ದು,ಅವರ ಜೊತೆಯೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚರ್ಚೆ ನಡೆಸಲಿದ್ದಾರೆ ಎಂದರು.
ತಮಿಳುನಾಡಿಗೆ ನೀರು ಹರಿಸುವ ಶಿಫಾರಸ್ಸಿನ ವಿರುದ್ಧ ಕಾವೇರಿ ಕೊಳ್ಳದ ರೈತರು ಪ್ರತಿಭಟನೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಹಜವಾಗಿಯೇ ಹೋರಾಟ ನಡೆಸುತ್ತಿದ್ದಾರೆ.ನಿನ್ನೆಯಿಂದಲೂ ಹೋರಾಟ ನಡೆದಿದೆ ಎಂದು ಹೇಳಿದರು.
ಇನ್ನು ಮೇಕೆ ದಾಟು ವಿಚಾರದಲ್ಲಿ ನ್ಯಾಯಾಲಯದ ತೀರ್ಮಾನವೇ ಅಂತಿಮ.ನ್ಯಾಯಾಲಯ ಈಗಾಗಲೇ ತೀರ್ಮಾನ ನೀಡಿದೆ.ಅದರಂತೆ ನಡೆಯಬೇಕು ಎಂದರು.
