
ಹರಿಗನ್ವಾನ್ ಬಳಿ ಬಸ್ ಅಪಘಾತ : ಅಮರನಾಥ ಯಾತ್ರಿಕರಿಗೆ ಗಾಯ
ಶ್ರೀನಗರ,ಜು.28: ಅಮರನಾಥ ಯಾತ್ರಿಕರಿದ್ದ ಬಸ್ವೊಂದು ತಿರುವಿನಲ್ಲಿ ಅಪಘಾತಕ್ಕೀಡಾಗಿ 39 ಜನರು ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಗಂಡೇರ್ಬಾಲ್ ಜಿಲ್ಲೆಯ ಕಂಗನ್ ಪ್ರದೇಶದ ಹರಿಗನ್ವಾನ್ ಬಳಿ ನಡೆದಿದೆ.

ಅದೃಷ್ಟವಶಾತ್ ಬಸ್ ಹತ್ತಿರದಲ್ಲೇ ಹರಿಯುತ್ತಿದ್ದ ಸಿಂಧ್ ನದಿಗೆ ಬೀಳುವುದರಿಂದ ಕೂದಲೆಳೆಯ ಅಂತರದಲ್ಲಿ ತಪ್ಪಿದ್ದು, ಭಾರಿ ಪ್ರಾಣಾಪಾಯ ಹಾಗೂ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.
ಪವಿತ್ರ ಅಮರನಾಥ ಗುಹಾ ದೇವಾಲಯದಲ್ಲಿ ಬಾಬಾ ಬರ್ಫಾನಿ ದರ್ಶನ ಪಡೆದು ಹಿಂತಿರುಗುತ್ತಿದ್ದ ಯಾತ್ರಿಕರಿದ್ದ ಬಸ್, ಹರಿಗನ್ವಾನ್ ಬಳಿಯ ತೀಕ್ಷ್ಣವಾದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿದ್ದ ಖಾಲಿ ಮನೆಗೆ ಡಿಕ್ಕಿ ಹೊಡೆದಿದೆ.
ಘಟನೆ ತಿಳಿದ ತಕ್ಷಣವೇ ಸ್ಥಳೀಯ ನಿವಾಸಿಗಳು, ಜಮ್ಮು-ಕಾಶ್ಮೀರ ಪೊಲೀಸರು, ಐಟಿಬಿಪಿ , ಸಿಆರ್ಪಿಎಫ್ ಹಾಗೂ ಭಾರತೀಯ ಸೇನೆಯ ಪಡೆಗಳು ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳು ಹಾಗೂ ಸ್ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಯಾತ್ರಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಎಲ್ಲರ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಗಂದರ್ಬಾಲ್ ಡೆಪ್ಯೂಟಿ ಕಮಿಷನರ್ ಹಾಗೂ ಆರೋಗ್ಯ ಅಧಿಕಾರಿಗಳೊಂದಿಗೆ ಮಾತನಾಡಿ ಯಾತ್ರಿಕರ ಆರೋಗ್ಯ ವಿಚಾರಿಸಿದ್ದು, ಗಾಯಾಳುಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡಲು ಸೂಚಿಸಿದ್ದಾರೆ.
ಗಾಯಗೊಂಡ ಯಾತ್ರಿಕರಿಗೆ ಅಗತ್ಯವಿರುವ ಎಲ್ಲಾ ಸಹಾಯ ಮತ್ತು ಅತ್ಯುತ್ತಮ ವೈದ್ಯಕೀಯ ಆರೈಕೆ ಖಚಿತಪಡಿಸಲು ಸೂಚಿಸಿದ್ದೇನೆ. ಗಾಯಗೊಂಡ ಭಕ್ತರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಶಿವನಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಿನ್ಹಾ ತಿಳಿಸಿದ್ದಾರೆ.
