
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಕಾಂಗ್ರೆಸ್ ಪಟ್ಟು
ನವದೆಹಲಿ,ಜು.24 : ನೀಟ್ ಪರೀಕ್ಷಾ ಅಕ್ರಮ ವಿರುದ್ಧದ ಹೋರಾಟ ಕೇಂದ್ರ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ.ಅದರಲ್ಲೂ ವಿದ್ಯಾರ್ಥಿಗಳ ಮೇಲೆ ಪೊಲೀಸರ ಲಾಠಿ ಚಾರ್ಚ್ ಹಾಗೂ ವಿಪಕ್ಷಗಳ ಸತತ ಹೋರಾಟದಿಂದ ಮೋದಿ ಸರ್ಕಾರಕ್ಕೆ ಇಕ್ಕಟ್ಟಿಗೆ ಸಿಲುಕಿದೆ.

ಇಂದು ಸಿಜೆಪಿ ಜೊತೆಗೆ ಕೇಂದ್ರ ಸರ್ಕಾರ 3ನೇ ಹಂತದ ಮಾತುಕತೆ ನಡೆಸಿರುವ ಮಧ್ಯೆಯೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಜುಲೈ 20 ರಂದು ದೆಹಲಿಯಲ್ಲಿ ಪ್ರತಿಭಟನಾ ಮೆರವಣಿಗೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ಮೇಲೆ ಭದ್ರತಾ ಸಿಬ್ಬಂದಿ ಪೆಲೆಟ್ ಗನ್ ಬಳಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಗಾಯಾಳು ಸಾಹಿಲ್ ಜೊತೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸರ್ಕಾರ ಹಾಗೂ ಪೊಲೀಸ್ ಇಲಾಖೆ ಪೆಲೆಟ್ ಗನ್ ಬಳಸಿಲ್ಲ ಎಂದು ಹೇಳುತ್ತಿದೆ. ಆದರೆ ಇಲ್ಲಿ ಸಾಕ್ಷಿ ಇದೆ ಎಂದು ಆಕ್ರೋಶ ಹೊರಹಾಕಿದರು.
ಶಾಂತಿಯುತವಾಗಿ ಪ್ರತಿಭಟನೆ ಮಾಡಿದ್ದಕ್ಕಾಗಿ ಸಾಹಿಲ್‌ನಂತಹ ಸಾವಿರಾರು ಜನರ ಮೇಲೆ ಪೊಲೀಸರು ದಾಳಿ ಮಾಡಿ ಥಳಿಸಿದ್ದಾರೆ. ಅವರ ತಪ್ಪೇನು?ಅವರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ.ಇದಕ್ಕೆ ಅವರು ನ್ಯಾಯ ಕೇಳುತ್ತಿದ್ದಾರೆ. ಸೋರಿಕೆಗೆ ಕಾರಣರಾದವರನ್ನು ವಜಾಗೊಳಿಸಬೇಕೆಂದು ಬಯಸುತ್ತಿದರು .ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಸಾಹಿಲ್‌ನಂತಹ ಗಾಯಾಳುಗಳ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದೇ ವೇಳೆ ಪೆಲೆಟ್‌ಗನ್ ಬಳಕೆಯಿಂದ ಗಾಯಗೊಂಡ ಸಾಹಿಲ್ ಲೋಹ್‌ಚಾಬ್‌ನನ್ನು ಮಾಧ್ಯಮಗಳ ಮುಂದೆ ಅವರು ಕರೆತಂದಿದ್ದರು. ಈ ವೇಳೆ, ಅವರ ಟೀ ಶರ್ಟ್‌ನ್ನು ಎತ್ತಿ ತೋಳು ಮತ್ತು ದೇಹದ ಮೇಲ್ಭಾಗದಲ್ಲಿ ಹಲವಾರು ಕಡೆ ಪೆಲೆಟ್‌ನಿಂದಾದ ಗಾಯದ ಗುರುತುಗಳನ್ನು ತೋರಿಸಿದರು.
