
ವಕೀಲರ ಸಂಘದಿಂದ ಅದ್ಧೂರಿ ಗಣೇಶೋತ್ಸವ..!
ಚನ್ನಗಿರಿ: ಚನ್ನಗಿರಿ ತಾಲ್ಲೂಕು ನ್ಯಾಯವಾದಿಗಳ ಸಂಘದಿಂದ ಸತತ ಮೂರನೇ ವರ್ಷದ ಗಣೇಶೋತ್ಸವ ಅದ್ಧೂರಿಯಾಗಿ ನಡೆಯಿತು.ನ್ಯಾಯಾಲಯ ಸಂಕೀರ್ಣದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪಿಸಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಸಲಾಯಿತು.
ವಕೀಲರು, ನ್ಯಾಯಾಲಯದ ಸಿಬ್ಬಂದಿ ಹಾಗೂ ಗಣ್ಯರು ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.ಮೂರು ದಿನಗಳ ಆಚರಣೆಯ ಸಮಾರೋಪದ ಅಂಗವಾಗಿ ಗಣೇಶಮೂರ್ತಿಯ ವಿಸರ್ಜನಾ ಮೆರವಣಿಗೆ ಆಯೋಜಿಸಲಾಯಿತು.

ತಾಲ್ಲೂಕಿನ ನ್ಯಾಯಾಧೀಶರುಗಳು ಮೆರವಣಿಗೆಗೆ ಚಾಲನೆ ನೀಡಿದರು.ಹಿರಿಯ, ಕಿರಿಯ ಹಾಗೂ ಮಹಿಳಾ ವಕೀಲರು ಸೇರಿದಂತೆ ಸಂಘದ ಸದಸ್ಯರು ಉತ್ಸಾಹದಿಂದ ಮೆರವಣಿಗೆಯಲ್ಲಿ ಪಾಲ್ಗೊಂಡರು.
ನ್ಯಾಯಾಲಯ ಸಂಕೀರ್ಣದಿಂದ ಆರಂಭವಾದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು.ಸಂಗೀತದ ತಾಳಕ್ಕೆ ವಕೀಲರು ನೃತ್ಯ ಮಾಡುತ್ತಾ, ಗಣೇಶನ ಜಯಘೋಷ ಮೊಳಗಿಸಿ ಸಂಭ್ರಮಿಸಿದರು.
ಅಲ್ಲಲ್ಲಿ ಪಟಾಕಿ ಸಿಡಿಸಿ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲಾಯಿತು.ಹಿರಿಯ–ಕಿರಿಯ, ಮಹಿಳೆ–ಪುರುಷ ಎಂಬ ಭೇದವಿಲ್ಲದೆ ಎಲ್ಲರೂ ಒಂದಾಗಿ ಪಾಲ್ಗೊಂಡು ಸಂಘಟನೆಯ ಒಗ್ಗಟ್ಟು ಪ್ರದರ್ಶಿಸಿದರು.
ಕೊನೆಯಲ್ಲಿ ಭಕ್ತಿಭಾವ ಹಾಗೂ ಸಂಭ್ರಮದೊಂದಿಗೆ ಗಣೇಶಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು.ಯಾವುದೇ ಅಹಿತಕರ ಘಟನೆಗಳಿಲ್ಲದೆ ಕಾರ್ಯಕ್ರಮ ಶಾಂತಿಯುತವಾಗಿ ಸಂಪನ್ನಗೊಂಡಿತು.
