LatestTop Storiesರಾಷ್ಟ್ರೀಯ-National

ಪರೀಕ್ಷಾ ಅಕ್ರಮ ತಡೆ ಕಾಯ್ದೆಗೆ ಸಂಪುಟ ಅಂಕಿತ

ನವದೆಹಲಿ,24 : ನೀಟ್ ಪರೀಕ್ಷಾ ಅಕ್ರಮ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ ಕರೆ ನೀಡಿದ್ದ ದೇಶವ್ಯಾಪಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.
ಒಂದೆಡೆ ಸಿಜೆಪಿ ಮುಖಂಡರು ಹಾಗೂ ಕೇಂದ್ರ ಸಚಿವರ ನಡುವೆ ನವದೆಹಲಿಯ ’ಕಾನ್‌ಸ್ಟಿಟ್ಯೂಷನ್ ಕ್ಲಬ್’ನಲ್ಲಿ ಮಾತುಕತೆ ಪೂರ್ಣಗೊಂಡಿದ್ದರೆ, ಇನ್ನೊಂದೆಡೆ ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಕಾನೂನನ್ನು ಮತ್ತಷ್ಟು ಬಿಗಿಗೊಳಿಸುವ ವಿಧೇಯಕ ತಿದ್ದುಪಡಿಗೆ ಕೇಂದ್ರ ಸಂಪುಟ ಸಭೆ ಅನುಮೋದನೆ ನೀಡಿದೆ.

ಕೇಂದ್ರ ಸಚಿವರಾದ ಜಗತ್ ಪ್ರಕಾಶ್ ನಡ್ಡಾ ಹಾಗೂ ಜಿತೇಂದ್ರ ಸಿಂಗ್ ಸಿಜೆಪಿ ವಕ್ತಾರರಾದ ಅಶುತೋಷ್ ರಾಂಕಾ ಮತ್ತು ಸೌರವ್ ದಾಸ್ ಅವರೊಂದಿಗೆ ನವದೆಹಲಿಯ ತಟಸ್ಥ ಸ್ಥಳವಾದ ಕಾನ್‌ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಸಭೆ ನಡೆಸಿ ಚರ್ಚಿಸಿದರು. ಈ ವೇಳೆ ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ಕಾಯ್ದೆ 2024ಕ್ಕೆ ಪ್ರಸ್ತಾವಿತ ತಿದ್ದುಪಡಿಗಳನ್ನು ತರಲು ಕೇಂದ್ರ ಸಚಿವ ಸಂಪುಟ ಅಂಕಿತ ಹಾಕಿದೆ.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಮತ್ತು ಜವಾಬ್ದಾರಿ ನಿಗದಿಪಡಿಸುವಂತೆ ಆಗ್ರಹಿಸಿ ಸಿಜೆಪಿ ಪ್ರತಿಭಟನೆ ಮುಂದುವರಿಸಿದೆ 26 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಹಿರಿಯ ಹೋರಾಟಗಾರ ಸೋನಮ್ ವಾಂಗ್‌ಚುಕ್ ಗೆ ಕೇಂದ್ರ ಸಚಿವರು ಭರವಸೆ ನೀಡಿದ ಬೆನ್ನಲ್ಲೇ ಅವರು ತಮ್ಮ ನಿರಾಹಾರ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ

ಪ್ರತಿಭಟನೆಯ ಬಿಸಿ ತಟ್ಟಿದ ಹಿನ್ನೆಲೆಯಲ್ಲಿ ನವದೆಹಲಿ ಮೆಟ್ರೋ ನಿಲ್ದಾಣ ಸೇರಿದಂತೆ ದೆಹಲಿಯ ಹಲವು ಮೆಟ್ರೋ ನಿಲ್ದಾಣಗಳ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಅಭಿಜಿತ್ ದಿಪ್ಕೆ ನೇತೃತ್ವದ ಸಿಜೆಪಿ ಸಂಘಟನೆಯು ದೇಶದ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲು ಕರೆ ನೀಡಿತ್ತು.ಪ್ರಧಾನಿ ನರೇಂದ್ರ ಮೋದಿ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರೂ, ಹೊಣೆಗಾರಿಕೆ ಮತ್ತು ಶಿಕ್ಷಣ ಸಚಿವರ ರಾಜೀನಾಮೆ ವಿಷಯದಲ್ಲಿ ಸರ್ಕಾರ ಸ್ಪಷ್ಟತೆ ನೀಡಿಲ್ಲ ಎಂದು ಸಿಜೆಪಿ ಆರೋಪಿಸಿದೆ.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ. ಈ ಕುರಿತು ಸಿಜೆಪಿ ಜೊತೆ ಮಾತುಕತೆ ನಡೆಸಿರುವ ಕೇಂದ್ರ ಸರ್ಕಾರವು ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಬೇಡಿಕೆಗೆ ಪ್ರತಿಕ್ರಿಯಿಸಲು ನಾಳೆಯವರೆಗೆ ಕಾಲಾವಕಾಶ ಕೋರಿದೆ.

ಪರಿಸ್ಥಿತಿ ಕೈಮೀರದಂತೆ ತಡೆಯಲು ಜಂತರ್ ಮಂತರ್ ಸುತ್ತಮುತ್ತಲಿನ 1.5 ಕಿ.ಮೀ ವ್ಯಾಪ್ತಿಯಲ್ಲಿ ಇಂಟರ್ನೆಟ್ ಸೇವೆಯನ್ನು ಮಧ್ಯರಾತ್ರಿಯವರೆಗೆ ವಿಸ್ತರಿಸಿ ಆದೇಶಿಸಲಾಗಿದೆ.

Share with Friends
author avatar
Digital Desk