Top Storiesವಿಜಯಪುರ-Vijayapura

ಮಕ್ಕಳಿದ್ದರೂ ಬೀದಿಗೆ ಬಿದ್ದ 90 ರ ವಯೋವೃದ್ಧೆ..!

ವಿಜಯಪುರ: ಹೆತ್ತ ತಾಯಿಯನ್ನು ಕಣ್ಣಿಟ್ಟು ಕಾಯಬೇಕಾದ ಮಕ್ಕಳೇ ಆಕೆಯನ್ನು ಬೀದಿಗೆ ತಳ್ಳಿರುವ ಮನಕಲಕುವ ಘಟನೆಯೊಂದು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಬಲೇಶ್ವರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
​ಹೆಣ್ಣು ಮಕ್ಕಳಿಂದಲೇ ತಾಯಿಯ ಅನಾಥ ಸ್ಥಿತಿ!


​ದೇವಸ್ಥಾನದ ಬಳಿ ಅನಾಥಳಾಗಿ ಬಿದ್ದಿರುವ ಈ ವೃದ್ಧೆಯ ಹೆಸರು ನಿಂಗಮ್ಮ ಬಿರಾದಾರ (90). ಈ ಅಜ್ಜಿಗೆ ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಒಬ್ಬ ಮಗ ಈಗಾಗಲೇ ಮೃತಪಟ್ಟಿದ್ದು, ಇನ್ನೊಬ್ಬ ಮಗ ಎಲ್ಲಿದ್ದಾನೋ ತಿಳಿಯದೆ ಕಾಣೆಯಾಗಿದ್ದಾನೆ. ಹೀಗಾಗಿ ಅಜ್ಜಿ ತನ್ನ ಹೆಣ್ಣು ಮಕ್ಕಳ ಆಶ್ರಯದಲ್ಲಿದ್ದರು. ಆದರೆ, ತಾಯಿಯನ್ನು ಅಸ್ಥೆಯಾಗಿ ನೋಡಿಕೊಳ್ಳಬೇಕಾದ ಹೆಣ್ಣು ಮಕ್ಕಳೇ, ಆಕೆಯನ್ನು ರಾತ್ರೋರಾತ್ರಿ ಊರಿನ ದೇವಸ್ಥಾನದ ಹತ್ತಿರ ತಂದು ಬಿಟ್ಟು ಪರಾರಿಯಾಗಿದ್ದಾರೆ.

ಮಕ್ಕಳಿದ್ದರೂ ಬೀದಿಗೆ ಬಿದ್ದ 90 ರ ವಯೋವೃದ್ಧೆ

ಪ್ರಸ್ತುತ 90 ವರ್ಷ ವಯಸ್ಸಿನ ಈ ವೃದ್ಧೆಯ ಆರೋಗ್ಯ ಸ್ಥಿತಿ ತೀವ್ರವಾಗಿ ಏರುಪೇರಾಗಿದೆ. ಎದ್ದು ಓಡಾಡಲಾಗದೆ, ಮಲಗಿದಲ್ಲಿಯೇ ಮಲ-ಮೂತ್ರ ಮಾಡಿಕೊಳ್ಳುತ್ತಿರುವ ದಯನೀಯ ಸ್ಥಿತಿಯಲ್ಲಿ ಅಜ್ಜಿ ಕಾಲ ಕಳೆಯುತ್ತಿದ್ದಾರೆ. ಇಷ್ಟು ದಿನಗಳ ಕಾಲ ಗ್ರಾಮದ ಕರುಣಾಳು ಮಹಿಳೆಯರೇ ಅಜ್ಜಿಗೆ ಅಲ್ಪ-ಸ್ವಲ್ಪ ಉಪಚಾರ ಮಾಡಿ, ಊಟ-ತಿಂಡಿ ನೀಡಿ ನೋಡಿಕೊಳ್ಳುತ್ತಿದ್ದರು.

ಪ್ರಸ್ತುತ ಅಜ್ಜಿಯ ಆರೋಗ್ಯ ಸಂಪೂರ್ಣ ಹದಗೆಟ್ಟಿದ್ದು, ದಿನನಿತ್ಯದ ಉಪಚಾರ ಮಾಡುವುದು ಗ್ರಾಮಸ್ಥರಿಗೂ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಹೆತ್ತ ಮಕ್ಕಳೇ ಕೈಬಿಟ್ಟು ಹೋದ ಕಾರಣ ಅಜ್ಜಿ ದಿಕ್ಕು ದೆಸೆಯಿಲ್ಲದೆ ಒದ್ದಾಡುತ್ತಿದ್ದಾರೆ.
​ತಕ್ಷಣವೇ ಸಂಬಂಧಪಟ್ಟ ತಾಲೂಕು ಆಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ವೃದ್ಧಾಶ್ರಮದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಅಜ್ಜಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸಿ, ಆಶ್ರಯ ಕಲ್ಪಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Share with Friends
author avatar
Digital Desk