Latestಮೈಸೂರು-Mysuru

ಚಾಮುಂಡೇಶ್ವರಿ ದರ್ಶನ ಪಡೆಯಲು ಸಕಲ ಸಿದ್ಧತೆ

ಮೈಸೂರು, ಜು.15: ಮೈಸೂರಿನ ಚಾಮುಂಡೇಶ್ವರಿ ದೇವಾಲಯದಲ್ಲಿ ಆಷಾಢ ಮಾಸದ ಅಂಗವಾಗಿ ನಡೆಯಲಿರುವ ವಿಶೇಷ ಪೂಜಾ ಕಾರ್ಯಕ್ರಮಗಳಿಗೆ ಜಿಲ್ಲಾಡಳಿತ ಹಾಗೂ ದೇವಾಲಯ ಪ್ರಾಧಿಕಾರವು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನಲ್ಲಿ ಅವರು ಆಷಾಢ ಮಾಸದ ಪೂರ್ವಸಿದ್ಧತೆ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಸಾಮಾನ್ಯ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸುಲಭ ದರ್ಶನ ಕಲ್ಪಿಸುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ. ಈ ಹಿನ್ನೆಲೆಯಲ್ಲಿ ವಿ.ಐ.ಪಿ ಹಾಗೂ ಶಿಫಾರಸು ಪತ್ರ ತರುವವರಿಗೆ ಪ್ರತ್ಯೇಕ ಸಮಯ ನಿಗದಿಪಡಿಸಲಾಗಿದೆ. ಮುಂಜಾನೆ 5:30 ರಿಂದ 9:30 ರವರೆಗೆ ಮಾತ್ರ ವಿ.ಐ.ಪಿ ದರ್ಶನಕ್ಕೆ ಅವಕಾಶವಿರಲಿದೆ.

ಶಿಫಾರಸು ಪತ್ರ ತರುವವರಿಗೂ ಇದೇ ಸಮಯ ಅನ್ವಯಿಸಲಿದ್ದು,ಅವರಿಗಾಗಿ ಪ್ರತ್ಯೇಕ ಕ್ಯೂ (ಸರತಿ ಸಾಲು) ವ್ಯವಸ್ಥೆ ಇರಲಿದೆ. ಶಾಸಕರು, ಸಚಿವರು ಮತ್ತು ನ್ಯಾಯಾಧೀಶರ ವಾಹನಗಳಿಗೆ ಮಾತ್ರ ಬೆಟ್ಟದ ಮೇಲಕ್ಕೆ ಹೋಗಲು ಅನುಮತಿ ಇರಲಿದ್ದು, ಉಳಿದ ಶಿಫಾರಸು ಪತ್ರ ತರುವವರು ಕೆಳಗಿನ ಲಲಿತ ಮಹಲ್ ಬಳಿ ವಾಹನ ಪಾರ್ಕ್ ಮಾಡಿ ಉಚಿತ ಬಸ್ಸುಗಳ ಮೂಲಕವೇ ಬರಬೇಕಾಗುತ್ತದೆ ಎಂದರು.

ಇನ್ನು 300 ರೂ. ಮುಖಬೆಲೆಯ ವಿಶೇಷ ದರ್ಶನದ ಟಿಕೆಟ್‌ಗಳನ್ನು ಈ ಬಾರಿ ರದ್ದುಗೊಳಿಸಲು ನಿರ್ಧರಿಸಲಾಗಿದೆ. ಈ ಹಿಂದೆ ರೂ. 300 ಟಿಕೆಟ್ ಪಡೆದವರು ಮತ್ತು ಧರ್ಮದರ್ಶನದ ಭಕ್ತರು ಒಂದೇ ಕಡೆ ಸೇರುತ್ತಿದ್ದರಿಂದ ಗೊಂದಲ ಉಂಟಾಗುತ್ತಿತ್ತು. ಅಲ್ಲದೆ, ಟಿಕೆಟ್ ಪಡೆದವರಿಗೂ ದರ್ಶನಕ್ಕೆ ಅಷ್ಟೇ ಸಮಯ ಹಿಡಿಯುತ್ತಿತ್ತು. ಇದರಿಂದ ಭಕ್ತರಿಗೆ ಯಾವುದೇ ವಿಶೇಷ ಅನುಕೂಲವಾಗದ ಕಾರಣ ಈ ಬಾರಿ ಈ ಟಿಕೆಟ್ ವ್ಯವಸ್ಥೆಯನ್ನು ಬೇಡ ಎಂದು ತೀರ್ಮಾನಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಮೆಟ್ಟಿಲು ಹತ್ತಿ ಬರುವ ಭಕ್ತರಿಗೆ ಶಾಶ್ವತ ಶೌಚಾಲಯದ ಬೇಡಿಕೆ ಇದ್ದು,ಅದನ್ನು ಶೀಘ್ರದಲ್ಲೇ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗು ದು. ಸದ್ಯದ ಆಷಾಢ ಶುಕ್ರವಾರದ ಪೂಜೆಗೆ ತಾತ್ಕಾಲಿಕ ವ್ಯವಸ್ಥೆಗಳನ್ನು ಮಾಡಲಾಗಿದೆ.

ಭಕ್ತರಿಗಾಗಿ ಮೂರು ಕಡೆ ‘ವಿಶೇಷ ನಿಗದಿತ ಸ್ಥಳಗಳನ್ನು ಮಾಡಲಾಗಿದ್ದು, ಪ್ರದೇಶಗಳಲ್ಲಿ ಸುಸಜ್ಜಿತ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ನಡೆದುಕೊಂಡು ಬರುವ ಎಲ್ಲಾ ಭಕ್ತಾದಿಗಳಿಗೆ ಬಾದಾಮಿ ಹಾಲು ಹಾಗೂ ಬಿಸ್ಕೆಟ್ ವಿತರಿಸುವ ವ್ಯವಸ್ಥೆ ಇರಲಿದೆ ಎಂದು ಹೇಳಿದರು.

ದೇವಾಲಯದ ಆವರಣದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಭಕ್ತರು ನೆಮ್ಮದಿಯಿಂದ ತಾಯಿ‌ ಶ್ರೀ ಚಾಮುಂಡೇಶ್ವರಿ ದರ್ಶನ ಪಡೆಯಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.

Share with Friends
author avatar
Digital Desk