
ತಾಕತ್ತಿದ್ದರೆ ನನ್ನ ವಿರುದ್ಧ ಎಫ್ಐಆರ್ ಮಾಡಿ : ಡಿಕೆಶಿಗೆ ಹೆಚ್ ಡಿಕೆ ಸವಾಲು
ನವದೆಹಲಿ ಜು.14 : ಬಿಡದಿಯ ಮಂಡಹಳ್ಳಿ ಗ್ರಾಮದ ರೈತರ ಮೇಲೆ ಎಫ್ಐಆರ್ ಮಾಡಿರುವ ಪೊಲೀಸರ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನಾಡಿದ್ದು ಆ ಗ್ರಾಮಕ್ಕೆ ನಾನು ಹೋಗುತ್ತೇನೆ, ತಾಕತ್ತಿದ್ದರೆ ನನ್ನ ವಿರುದ್ಧ ಎಫ್ಐಆರ್ ಮಾಡಿ ಎಂದು ಸವಾಲು ಹಾಕಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಸಚಿವ ಕುಮಾರಸ್ವಾಮಿ, ಸಂಬಂಧವಿಲ್ಲದವರು ಕೊಟ್ಟ ದೂರಿನ ಮೇಲೆ ವಿನಾಕಾರಣ ರೈತರ ಮೇಲೆ ಎಫ್ಐಆರ್ ಹಾಕಿದ್ದಾರೆ. ಅಕ್ರಮವಾಗಿ ಜಮೀನಿಗೆ ಬಂದು ಸರ್ವೆ ಮಾಡಲು ಬಂದರೆ ರೈತರು ಸಹಜವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಸರ್ಕಾರದ ಚಿತಾವಣೆಯಿಂದಲೇ ಅಧಿಕಾರಿಗಳು ಸರ್ವೆಗೆ ಬಂದಿದ್ದಾರೆ. ಮುಖ್ಯಮಂತ್ರಿಗೆ ಇಷ್ಟೊಂದು ಹಠ ಏಕೆ ಎಂಬುದೇ ಅರ್ಥವಾಗುತ್ತಿಲ್ಲ. ರೈತರ ಮೇಲೆ ಎರಡು ಎಫ್ಐಆರ್’ಗಳನ್ನು ಹಾಕಿದ್ದಾರೆ. ಅವರಿಗೆ ಧೈರ್ಯವಿದ್ದರೆ ನನ್ನ ವಿರುದ್ಧ ಕೇಸ್ ಹಾಕಲಿ. ನಾನೇ ಚಿತಾವಣೆ ಮಾಡುತ್ತಿದ್ದೇನೆ ಎಂದು ಕೆಲವರು ಹೇಳುತ್ತಿದ್ದಾರೆ. ಪಾಪ.. ನನ್ನ ಹೆಸರು ಏಕೆ ಬಿಟ್ಟರೋ ಗೊತ್ತಿಲ್ಲ. ನನ್ನನ್ನೇ ಎ1 ಎಂದು ಹಾಕಿಕೊಳ್ಳಿ. ನಿಮಗೆ ಧೈರ್ಯ ಇದ್ದರೆ ಮಾಡಿ ಎಂದು ಸವಾಲು ಹಾಕಿದರು.
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಸಚಿವ ಕುಮಾರಸ್ವಾಮಿ ಅವರು, ನಿಮ್ಮ ಭಂಡತನವನ್ನು ಮತ್ತು ವರ್ತನೆಯನ್ನು ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ರೈತರಿಂದ ಇಷ್ಟೆಲ್ಲಾ ತೀವ್ರ ವಿರೋಧ ಇದ್ದರೂ ಕೂಡ ಅತ್ಯಂತ ಫಲವತ್ತಾದ ಭೂಮಿಯನ್ನು ಕೊಳ್ಳೆ ಹೊಡೆಯಲು ಸರ್ಕಾರ ಹೊರಟಿರುವುದು ಏಕೆ ಎಂಬುದು ಕೂಡ ಜನರಿಗೆ ಅರ್ಥವಾಗುತ್ತಿದೆ ಎಂದು ಕಿಡಿಕಾರಿದರು.
ಊರಿನಲ್ಲಿ ಇಲ್ಲದವರ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ. ದೆಹಲಿಗೆ ಬಂದಿದ್ದವರ ಮೇಲೆಯೂ ಪ್ರಕರಣ ದಾಖಲಿಸಿ ಎಫ್ಐಆರ್ ಮಾಡಿದ್ದಾರೆ! ಇಂತಹ ಬೆದರಿಕೆ ಮತ್ತು ಕೇಸುಗಳಿಗೆ ಹೆದುರುವ ಪ್ರಶ್ನೆ ಇಲ್ಲ. ರೈತರೇ ಶಾಂತಿಯುವಾಗಿ ನಿಮ್ಮ ಪ್ರತಿಭಟನೆ ಮುಂದುವರೆಸಿ. ನ್ಯಾಯಾಲಯದ ಮುಂದೆ ಹೋರಾಟ ಮಾಡೋಣ. ನಾನು ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇನೆ ಎಂದು ಹೇಳಿದರು.
ಮುರಳಿ ಎನ್ನುವ ಇನ್ಸ್ ಪೆಕ್ಟರ್ ಒಬ್ಬರ ಕಡೆಯಿಂದ ದೂರು ಪಡೆದುಕೊಂಡಿದ್ದಾರೆ. ಇವರ ದೂರಿನ ಮೇಲೆ ಹಾಕಿರುವ ಎಫ್ಐಆರ್ ನಲ್ಲಿ ಯಾರು ಹೆಸರನ್ನು ಉಲ್ಲೇಖ ಮಾಡಿಲ್ಲ. ಇದರಲ್ಲಿ ಎ1 ಆರೋಪಿ ಸಾಮಾನ್ಯ ವ್ಯಕ್ತಿ ಎಂದು ಬರೆಯಲಾಗಿದೆ. ಇನ್ನೊಬ್ಬ ಚಾಲಕ ವೃತ್ತಿ ಮಾಡುವ ಮೊಹಮ್ಮದ್ ಸಮೀರ್ ಕಡೆಯಿಂದ ಒಂದು ದೂರು ಕೊಡಿಸಿದ್ದಾರೆ. ಈ ವ್ಯಕ್ತಿ ವಾಸ ಇರುವುದು ರಾಮನಗರದಲ್ಲಿ. ಮಂಡಹಳ್ಳಿಗೂ ಈತನಿಗೂ ಯಾವುದೇ ಸಂಬಂಧ ಇಲ್ಲ. ಈತ 11 ಜನರ ಮೇಲೆ ದೂರು ನೀಡಿದ್ದಾನೆ. ಈತನ ದೂರನ್ನು ನೋಡಿದರೆ ದುರುದ್ದೇಶಪೂರ್ವಕವಾಗಿ ಪೂರ್ವ ನಿಯೋಜಿತವಾಗಿ ಯಾರ ಯಾರ ಮೇಲೆ ದೂರು ಕೊಡಬೇಕು ಎಂದು ಮಾಡಿ ಕಂಪ್ಲೇಂಟ್ ಬರೆಸಿದ ಹಾಗಿದೆ ಎಂದು ಹೇಳಿದರು.
ದೂರು ಕೊಟ್ಟ ಇನ್ಸ್ ಪೆಕ್ಟರ್ ದಿನವೂ ಅಲ್ಲಿರುವ ವ್ಯಕ್ತಿ. 500 ದಿನಗಳಿಂದ ಧಾಟಿಯುತವಾಗಿ ನಡೆಯುತ್ತಿರುವ ಪ್ರತಿಭಟನೆಯನ್ನು ದಿನವೂ ನೋಡುತ್ತಿರುವ ಅಧಿಕಾರಿ. ಕೊನೆ ಪಕ್ಷ ಈ ಅಧಿಕಾರಿ ನೂರು ದಿನವಾದರೂ ಅಲ್ಲಿ ಕರ್ತವ್ಯ ನಿರ್ವಹಿಸಿರಬಹುದು. ರಾಮನಗರದಲ್ಲಿರುವ ಈ ಚಾಲಕ ನೆನ್ನೆ ಅಷ್ಟೇ ಇಲ್ಲಿಗೆ ಬಂದವನು, ಈತನ ಕೈಯಲ್ಲಿ 11 ಜನರ ವಿರುದ್ಧ ಹೆಸರುಗಳು, ವಿಳಾಸಗಳ ಸಮೇತ ದೂರು ಬರೆಸಿಕೊಂಡಿದ್ದಾರೆ. ಆ 11 ಜನರ ಹೆಸರುಗಳು ಈತನಿಗೆ ಹೇಗೆ ಗೊತ್ತು? ಅದರಲ್ಲೂ ಮಹಿಳೆಯರ ಹೆಸರುಗಳು ಮತ್ತು ಅವರ ವಿಳಾಸಗಳು ಅವನಿಗೆ ಹೇಗೆ ಗೊತ್ತು? ನನಗೆ ಬಂದ ಮಾಹಿತಿ ಪ್ರಕಾರ ಈ ಚಾಲಕನ ದೂರಿನ ಆಧಾರದ ಆಗಿರುವ ಎಫ್ಐಆರ್ ನಲ್ಲಿ ಎ1 ಆರೋಪಿಯಾಗಿರುವ ಪ್ರಕಾಶ ಎನ್ನುವ ವ್ಯಕ್ತಿ 500 ದಿನಗಳಿಂದ ಶಾಂತಿಯುತವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ. ಮೊದಲಿಂದಲೂ ಈ ಯೋಜನೆಯನ್ನು ವಿರೋಧಿಸಿಕೊಂಡು ಬಂದಿದ್ದ. ಘಟನೆ ನಡೆದ ಸಂದರ್ಭದಲ್ಲಿ ಈತ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತಿದ್ದ. ಹೀಗಿದ್ದ ಮೇಲೆ ಯಾವ ಆಧಾರದ ಮೇಲೆ ಈತನನ್ನು ಎ1 ಮಾಡಿದರು ಎಂದು ಪ್ರಶ್ನಿಸಿದರು.
ತಮ್ಮ ಜಮೀನನ್ನು ಕಿತ್ತುಕೊಳ್ಳಲು ಬಂದರೆ ಹೆಣ್ಣುಮಕ್ಕಳು ಸುಮ್ಮನೆ ಇರಲು ಸಾಧ್ಯವೇ? ಭೂಮಿ ಹೋಗುತ್ತದೆ ಎಂಬ ಆತಂಕದಲ್ಲಿ ಹೆಣ್ಣು ಮಕ್ಕಳು ಪೊರಕೆ ತೋರಿಸಿರಬಹುದು. ಈಗಾಗಲೇ ಈ ಸರ್ಕಾರ ಕೊಲೆಗಡುಕ ಸರ್ಕಾರ ಎಂದು ಬಿರುದು ತೆಗೆದುಕೊಂಡಿದೆ. ಅಂಥ ಸರ್ಕಾರದ ಮುಖ್ಯಸ್ಥರೇ ನೀವಾಗಿದ್ದೀರಿ. ಸುಳ್ಳು ಆರೋಪಗಳ ಮೇಲೆ ರೈತರನ್ನು ಕೊಲೆಗಡುಕರನ್ನಾಗಿ ಮಾಡಬೇಡಿ ಎಂದು ಎಚ್ಚರಿಸುತ್ತಿದ್ದೇನೆ. ಯಾರ ಯಾರ ಕಾಲದಲ್ಲಿ, ಯಾರ್ಯಾರ ಸರ್ಕಾರದಲ್ಲಿ ಕೊಲೆಗಡುಕತನಗಳು ಹೇಗೆ ನಡೆದವು ಎನ್ನುವುದು ಗೊತ್ತಿದೆ ಎಂದು ಹೇಳಿದರು.
ಕಾರು ಓಡಿಸಿಕೊಂಡು ಬಂದಿದ್ದ ಈ ಚಾಲಕನಿಗೆ ರೈತರು ಜೀವ ಬೆದರಿಕೆ ಏಕೆ ಒಡ್ಡುತ್ತಾರೆ? ಅವನನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವ ಅಗತ್ಯ ಜನರಿಗೆ ಏಕೆ ಇರುತ್ತದೆ? ಪೊಲೀಸರ ಪರವಾಗಿ ಮತ್ತು ಸರ್ವೆಯರಗಳ ಪರವಾಗಿ ದೂರು ಕೊಡಲಿಕ್ಕೆ ಇವನು ಯಾರು? ಇವನಿಗೆ ತೊಂದರೆಯಾಗಿದ್ದರೆ ಅಷ್ಟೇ ಇವನು ದೂರು ಕೊಡಲು ಅವಕಾಶ ಇರುತ್ತದೆ. ಅಧಿಕಾರಿಗಳ ಉಸಾಬರಿ ಇವನಿಗೆ ಯಾಕೆ? ಅಗತ್ಯವಿದ್ದರೆ ಅಧಿಕಾರಿಗಳೇ ದುಡ್ಡು ಕೊಡುತ್ತಾರೆ, ಅಲ್ಲವೇ? ವಿಚಿತ್ರವೆಂದರೆ ಪೊಲೀಸ್ ಇನ್ಸ್ ಪೆಕ್ಟರ್ ಮತ್ತು ಕಾರು ಚಾಲಕನ ದೂರುಗಳ ಒಕ್ಕಣಿ ಹೆಚ್ಚು ಕಮ್ಮಿ ಒಂದೇ ರೀತಿಯಲ್ಲಿದೆ. ಕಾಪಿ ಪೇಸ್ಟ್ ಮಾಡಿದ್ದಾರೆ. ಅಲ್ಲಿಗೆ ಪೂರ್ವ ನಿಯೋಜಿತವಾಗಿ ಸಂಚು ರೂಪಿಸಿ ರೈತರನ್ನು ಸಂಕಷ್ಟಕ್ಕೆ ದೂಡಬೇಕು ಎನ್ನುವ ಷಡ್ಯಂತರವನ್ನು ಸರ್ಕಾರವೇ ನಡೆಸಿದೆ ಎಂದಾಯಿತು ಎಂದು
ಅನುಮಾನ ವ್ಯಕ್ತಪಡಿಸಿದರು.
ದೆಹಲಿಯಿಂದ ರಾಜ್ಯಕ್ಕೆ ಬಂದ ಮೇಲೆ ನಾನು ಮಂಡಹಳ್ಳಿಗೆ ಭೇಟಿ ಕೊಡುತ್ತೇನೆ. ನಾಡಿದ್ದು ಗುರುವಾರ ಬೆಳಗ್ಗೆ ಅಲ್ಲಿಗೆ ಹೋಗುತ್ತಿದ್ದೇನೆ. ಏನು ಮಾಡುತ್ತಿರುವ ಮಾಡಿ, ರೈತರ ಪರ ನಾನು ನಿರ್ಭಯವಾಗಿ ನಿಲ್ಲುತ್ತೇನೆ ಎಂದು ಕುಮಾರಸ್ವಾಮಿ ಸರ್ಕಾರಕ್ಕೆ ಸ್ಪಷ್ಟ ಎಚ್ಚರಿಕೆ ನೀಡಿದರು.
