Latestರಾಜ್ಯ-Karnataka

ಗಾನಕೋಗಿಲೆ ನಿಧನಕ್ಕೆ ಸಿಎಂ ಸೇರಿ ಗಣ್ಯರ ಸಂತಾಪ

ಬೆಂಗಳೂರು,ಜು.12 : ಗಾನಕೋಗಿಲೆ ಎಸ್.ಜಾನಕಿ ಅವರ ನಿಧನಕ್ಕೆ ಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ,ಡಿಸಿಎಂ ಜಿ.ಪರಮೇಶ್ವರ್ ಸೇರಿದಂತೆ ಸಚಿವರು, ಶಾಸಕರು, ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.

ಡಿಕೆಶಿವಕುಮಾರ್ ಸೇರಿದಂತೆ ಸಚಿವರು ಶಾಸಕರು ಮುಖಂಡರ ಸಂತಾಪ

ಸದ್ಯ ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಎಸ್.ಜಾನಕಿ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಸಿಎಂ ಡಿ.ಕೆ.ಶಿವಕುಮಾರ್, ತಮ್ಮ ಕಂಠಸಿರಿಯ ಮೂಲಕ ಕೋಟ್ಯಂತರ ಜನರ ಮನೆಮನಗಳಲ್ಲಿ ನೆಲೆಸಿದ್ದ ಬಹುಭಾಷಾ ಗಾಯಕಿ ಜಾನಕಮ್ಮನವರ ನಿಧನದಿಂದ ಸಂಗೀತ ಕ್ಷೇತ್ರದ ಮಹಾನ್ ಸ್ವರಮಾಧುರ್ಯ ಮೌನವಾದಂತಾಗಿದೆ ಎಂದು ಕಂಬನಿ ಮಿಡಿದಿದ್ದಾರೆ.
ಡಿಸಿಎಂ ಜಿ.ಪರಮೇಶ್ವರ್ ಸಂತಾಪ ವ್ಯಕ್ತಪಡಿಸಿ, ಸಂಗೀತ ಪ್ರಿಯರನ್ನು ರಂಜಿಸಿದ್ದ ಸ್ವರ ಸಾಮ್ರಾಜ್ಞಿಯನ್ನು ಕಳೆದುಕೊಂಡು ಸಂಗೀತ ಲೋಕ ಇಂದು ಬಡವಾಗಿದೆ.ಜಾನಕಿಯಮ್ಮನ ಹಾಡುಗಳಿಗೆ ಕಿವಿಗೊಟ್ಟು ಕೂತರೆ ಸಂಗೀತದ ಕಡಲಲ್ಲಿ ತೇಲಿಹೋದ ಅನುಭವವಾಗುತ್ತಿತ್ತು ಎಂದಿದ್ದಾರೆ.

ಕೋಟ್ಯಂತರ ಜನರ ಮನಸ್ಸನ್ನು ಸ್ಪರ್ಶಿಸಿದ ದಿಗ್ಗಜ ಹಿನ್ನಲೆ ಗಾಯಕಿ ಶ್ರೀಮತಿ ಎಸ್. ಜಾನಕಿ ಅಮ್ಮನವರು ಇಹಲೋಕ ತ್ಯಜಿಸಿದ ಸುದ್ದಿ ಅತ್ಯಂತ ದುಃಖ ತಂದಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಂಬನಿ ಮಿಡಿದಿದ್ದಾರೆ.

ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದು,೬ ದಶಕಗಳ ಕಾಲ ತಮ್ಮ ಕಂಠಸಿರಿಯ ಮೂಲಕ ಸಂಗೀತ ಸೇವೆಗೈದ ಮೇರು ಪ್ರತಿಭೆಯೊಂದು ನಮ್ಮನ್ನಗಲಿರುವುದು ಕಲಾ ಜಗತ್ತಿಗಾಗಿರುವ ತುಂಬಲಾರದ ನಷ್ಟ ಎಂದಿದ್ದಾರೆ.
ಕೇಂದ್ರ ಸಚಿವ ಹೆಚ್ ಡಿಕೆ ಸಂತಾಪ ವ್ಯಕ್ತಪಡಿಸಿ ತಮ್ಮ ಮಧುರ ಕಂಠದಿಂದ ಕೋಟ್ಯಂತರ ಸಂಗೀತ ಪ್ರೇಮಿಗಳ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರುವ ಮಹಾನ್ ಗಾಯಕಿ ಜಾನಕಿ ಅವರು. ಮೈಸೂರಿನಲ್ಲಿ ನೆಲೆಸಿದ್ದ ಅವರು ಕನ್ನಡಿಗರಿಗೆ ಬಹು ಅಚ್ಚುಮೆಚ್ಚಿನ ಗಾಯಕರಾಗಿದ್ದರು ಎಂದಿದ್ದಾರೆ.

ಎಸ್.ಜಾನಕಿ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ತೀವ್ರ ಸಂತಾಪ ಸೂಚಿಸಿ ತಮ್ಮ ಸುದೀರ್ಘ ಗಾಯನ ಜೀವನದಲ್ಲಿ ಅವರು ೧೭ ಭಾಷೆಗಳಲ್ಲಿ ೪೮ ಸಾವಿರಕ್ಕೂ ಅಧಿಕ ಅಮರ ಗೀತೆಗಳಿಗೆ ದನಿಯಾಗಿದ್ದರು ಎಂದು ಸ್ಮರಿಸಿದ್ದಾರೆ.

Share with Friends
author avatar
Digital Desk