LatestTop Storiesಜಿಲ್ಲಾ ಸುದ್ದಿಗಳು | District Newsಬೆಂಗಳೂರು-Bengaluruರಾಜಕೀಯ | Politicsರಾಜ್ಯ-Karnataka

ಕುಮಾರಸ್ವಾಮಿ -ಖಂಡ್ರೆ ನಡುವೆ “ಹೆಚ್ಎಂಟಿ” ಕದನ!

ಬೆಂಗಳೂರು,ಜು.9: ಹೆಚ್ಎಂಟಿ ಜಾಗಕ್ಕೂ ಅರಣ್ಯ ಇಲಾಖೆಗೂ ಯಾವುದೇ ಸಂಬಂಧ ಇಲ್ಲ. ಆ ಜಮೀನನ ಮೇಲೆ ಅರಣ್ಯ ಇಲಾಖೆಗೆ ಯಾವುದೇ ರೀತಿಯ ಹಕ್ಕು ಇರುವುದಿಲ್ಲ. ಬೇಕಿದ್ದರೆ ಈ ಬಗ್ಗೆ ಮಾತನಾಡುತ್ತಿರುವವರು ದಾಖಲೆಗಳನ್ನು ಪರಿಶೀಲನೆ ಮಾಡಲಿ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್ಎಂಟಿ ಭೂಮಿಯ ಮೇಲೆ ಹಿಂದಿನ ಅರಣ್ಯ ಸಚಿವರಿಗೆ ಯಾಕೋ ವಿಪರೀತ ಆಸಕ್ತಿ ಇದೆ. ಯಾವ ಕಾರಣಕ್ಕೆ ಅವರು ಈ ಪರಿಯ ಆಸಕ್ತಿ ತೋರುತ್ತಿದ್ದಾರೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ ಎಂದು ಹೇಳಿದರು.

ಹೆಚ್ಎಂಟಿ ಜಾಗದ ಬಗ್ಗೆ ಯಾವುದೇ ಗೊಂದಲಗಳಿಲ್ಲ. ಅದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ. ಯಾವುದೇ ಕಾರಣಕ್ಕೂ ಹೆಚ್‌ಎಂಟಿ ಭೂಮಿಯನ್ನು ಮುಟ್ಟಲು ಆಗುವುದಿಲ್ಲ. ನ್ಯಾಯಾಲಯದ ತಡೆಯಾಜ್ಞೆ ಕೂಡ ನೀಡಿದೆ. ಈಶ್ವರ್ ಖಂಡ್ರೆ ಅರಣ್ಯ ಸಚಿವರಾಗಿದ್ದಾಗ ಎರಡು ವರ್ಷಗಳಿಂದ ಎಲ್ಲೆಲ್ಲಿ ಭೂಮಿ ಉಳಿಸಿದ್ದಾರೆ? ಅರಣ್ಯ ಭೂಮಿ ದೊಡ್ಡ ಮಟ್ಟದಲ್ಲಿ ಅರಣ್ಯ ಭೂಮಿಯನ್ನು ಲೂಟಿ ಮಾಡಿದ್ದಾರೆ. ಅದನ್ನೆಲ್ಲಾ ವಾಪಸ್ ಪಡೆಯುವುದು ಯಾವಾಗ ಎಂದು ಸ್ವಲ್ಪ ಹೇಳುವಿರಾ ಖಂಡ್ರೆ ಅವರೇ? ಎಂದು ಪ್ರಶ್ನಿಸಿದರು.

ಇದಲ್ಲದೆ, ಒಕ್ಕೂಟ ವ್ಯವಸ್ಥೆ ಬಗ್ಗೆ ಕಿಂಚಿತ್ತೂ ಪರಿಜ್ಞಾನ ಇಲ್ಲದ ಇವರು ಕೇವಲ ಹೆಚ್‌ಎಂಟಿ ಮತ್ತು ಕುದುರೆಮುಖ ಬಗ್ಗೆ ಮಾತ್ರ ಯಾಕೆ ಮಾತನಾಡುತ್ತಿದ್ದಾರೆ? ಬೇರೆಯವರಿಗೆ ಕೊಟ್ಟ ಜಮೀನನ್ನು ವಾಪಸ್ ಪಡೆಯುವ ಕೆಲಸವನ್ನು ಮೊದಲು ರಾಜ್ಯ ಸರ್ಕಾರ ಮಾಡಲಿ ಎಂದು ಸವಾಲು ಹಾಕಿದರು.ಜೊತೆಗೆ ಮೂರು ವರ್ಷ ಅರಣ್ಯ ಮಂತ್ರಿಯಾಗಿ ಕೆಲಸ ಮಾಡಿದ್ದೀರಿ. ಆ ಸಂದರ್ಭದಲ್ಲಿ ಏನು ಕಡೆದು ಕಟ್ಟಿ ಹಾಕಿದ್ದೀರಿ? ನೀವು ಅರಣ್ಯ ಮಂತ್ರಿಯಾಗಿ ಎಷ್ಟು ಅರಣ್ಯ ಭೂಮಿಯನ್ನು ವಾಪಸ್ ಪಡೆದು ಉಳಿಸಿದ್ದೀರಿ? ಕಾನ್ ಕಾರ್ಡ್ ಇಂಡಿಯಾ ಕೇಸ್ ಇನ್ನು ಕೋರ್ಟ್’ನಲ್ಲಿ ನಡೆಯುತ್ತಿದೆ. ಇದು ಗೊತ್ತಿಲ್ಲವಾ ನಿಮಗೆ? ಎಂದು ಕಿಡಿಕಾರಿದರು.

ಈಶ್ವರ ಖಂಡ್ರೆ ಅವರೇ, ನಿಮ್ಮಿಂದ ನಾನು ಕಲಿಯಬೇಕಿಲ್ಲ. ಎಚ್ಎಂಟಿಯ ಜಾಗದಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ಅಪಾರ್ಟ್ಮೆಂಟ್’ಗಳು ತಲೆಯೆತ್ತಿ ನಿಂತಿವೆ. ಅಪಾರ್ಟ್ಮೆಂಟ್’ಗಳಲ್ಲಿ ಯಾರು ಯಾರು ವಾಸ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿದೆ. ಇದರ ಬಗ್ಗೆ ಮೂರು ವರ್ಷಗಳಲ್ಲಿ ಏನೇನು ಪರಿಶೀಲನೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು.

Share with Friends
author avatar
Digital Desk