Weatherರಾಜ್ಯ-Karnataka

ಮುಂಗಾರು ಅಬ್ಬರ.. ಕರಾವಳಿ, ಮಲೆನಾಡು ತತ್ತರ..!

ಬೆಂಗಳೂರು,ಜು.8:ರಾಜ್ಯದಲ್ಲಿ ಮುಂಗಾರು ಮಳೆ ತೀವ್ರಗೊಂಡ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಇಂದು ಹಲವು ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಆಯಾ ಜಿಲ್ಲಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಸದ್ಯ ಕರಾವಳಿ, ಮಲೆನಾಡು ಮತ್ತು ಉತ್ತರ ಒಳನಾಡಿನಲ್ಲಿ ಮಳೆಯ ಅಬ್ಬರ ಜೋರಾಗಿದ್ದು,ರಜೆ ನೀಡಲಾದ ದಿನಗಳನ್ನು ಮುಂದಿನ ವಾರಾಂತ್ಯದ ದಿನಗಳಲ್ಲಿ ತರಗತಿ ನಡೆಸುವ ಮೂಲಕ ಸರಿದೂಗಿಸಲು ನಿರ್ಧರಿಸಲಾಗಿದೆ.
ಕೊಡಗು ,ದಕ್ಷಿಣ ಕನ್ನಡ ,ಶಿವಮೊಗ್ಗ, ಚಿಕ್ಕಮಗಳೂರು,ಬೆಳಗಾವಿ,ಕೊಡಗು, ಹಾಸನ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಮುಂಗಾರು ಅಬ್ಬರ ಕರಾವಳಿ ಮಲೆನಾಡು ತತ್ತರ


ಇನ್ನು ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ನೀಡಲಾಗಿದ್ದು,ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಬೆಳಗಾವಿ ಜಿಲ್ಲೆಯ ಬೆಳಗಾವಿ, ನಿಪ್ಪಾಣಿ ಹಾಗೂ ಖಾನಾಪುರ ಸೇರಿದಂತೆ ಒಟ್ಟು 3 ತಾಲೂಕುಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಇನ್ನುಳಿದಂತೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು,ಬೇತ್ರಿ ಬಳಿ ಕಾವೇರಿ ನದಿ ಸೇರಿದಂತೆ ಕದನೂರು, ಬೋಯಿಕೇರಿ, ಬೇಟೋಳಿ ಹಳ್ಳ-ಕೊಳ್ಳಗಳಲ್ಲಿ ನೀರಿನ ಮಟ್ಟ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೆರೆ-ಕಟ್ಟೆಗಳು ತುಂಬಿ ಹರಿಯುತ್ತಿದ್ದು, ಭತ್ತದ ಗದ್ದೆಗಳು ಜಲಾವೃತಗೊಂಡಿವೆ.ಅಲ್ಲದೆ, ಕಾಫಿ ತೋಟಗಳು ಹಾಗೂ ಇತರೆಡೆಗಳಲ್ಲಿ ಮರ ಮತ್ತು ಮರದ ಕೊಂಬೆಗಳು ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಧರೆಗುರುಳಿವೆ. ಇದರಿಂದಾಗಿ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಸೆಸ್ಕ್ ಸಿಬ್ಬಂದಿ ಯುದ್ಧೋಪಾದಿಯಲ್ಲಿ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.


ಇದೇ ವೇಳೆ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ-ವೆಂಗುರ್ಲಾ ರಾಜ್ಯ ಹೆದ್ದಾರಿ ಮೇಲೆಯೇ ಬಂಡೆಗಲ್ಲುಗಳು ಉರುಳಿ ಬಿದ್ದಿವೆ. ಮಹಾರಾಷ್ಟ್ರ ಸಾರಿಗೆ ಬಸ್, ಕಾರು ದಾಟಿ ಹೋಗುವ ವೇಳೆಯಲ್ಲಿಯೇ ರಸ್ತೆಗೆ ಬೃಹತ್ ಬಂಡೆಗಲ್ಲುಗಳು ಬಿದ್ದಿದ್ದು, ಕ್ಷಣಾರ್ಧದಲ್ಲಿ ಬಸ್ ಮತ್ತು ಕಾರು ಬಚಾವ್ ಆಗಿವೆ. ಇದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.ಬಂಡೆಗಲ್ಲುಗಳು ಉರುಳಿ ಬಿದ್ದ ಬಳಿಕ ಕೆಲ ಗಂಟೆಗಳ ಕಾಲ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಜೆಸಿಬಿಗಳ ಮೂಲಕ ಬಂಡೆಗಲ್ಲು ತೆರವು ಕಾರ್ಯಾಚರಣೆ ನಡೆಸಲಾಯಿತು.
ಈ ನಡುವೆ ಹಾಸನ ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು,ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಆರ್ಭಟಕ್ಕೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶಿರಾಡಿಘಾಟ್ ವ್ಯಾಪ್ತಿಯ ಕಪ್ಪಳ್ಳಿ ಬಳಿ ಗುಡ್ಡ ಕುಸಿತ ಉಂಟಾಗಿದೆ.
ಸಕಲೇಶಪುರದಿಂದ ಮಂಗಳೂರು ಕಡೆ ತೆರಳುವ ಮಾರ್ಗದಲ್ಲಿ ಘಟನೆ ನಡೆದಿದ್ದು, ತಕ್ಷಣ ಜೆಸಿಬಿ ಬಳಸಿ ಸಿಬ್ಬಂದಿ ಮಣ್ಣು ತೆರವುಗೊಳಿಸುವ ಕಾರ್ಯ ಮಾಡಿದ್ದಾರೆ.ಈ ಬಾರಿ ಗುಡ್ಡ ಕುಸಿದರೂ ಸಂಚಾರಕ್ಕೆ ಸಮಸ್ಯೆ ಆಗದಂತೆ ವ್ಯವಸ್ಥೆ ಮಾಡಲಾಗಿದೆ. ಶಿರಾಡಿಘಾಟ್‌ನಲ್ಲಿ ಗುಡ್ಡ ಕುಸಿತದ ಸಾಧ್ಯತೆ ಇರುವ ಸ್ಥಳಗಳನ್ನು ಜಿಲ್ಲಾಡಳಿತ ಗುರುತಿಸಿದೆ.

Share with Friends
author avatar
Digital Desk