LatestTop Storiesರಾಷ್ಟ್ರೀಯ-National

ನೀಟ್‌-ಯುಜಿ ಮರುಪರೀಕ್ಷೆಯಲ್ಲಿ ಭಾರಿ ಅಕ್ರಮ ಬೆಳಕಿಗೆ : 9 ನಕಲಿ ಅಭ್ಯರ್ಥಿಗಳು ಸೇರಿ 30 ಮಂದಿ ಬಂಧನ

ಪಾಟ್ನಾ, ಜೂನ್ 22: ಬಿಹಾರದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆದ ನೀಟ್‌ ಯುಜಿ (NEET UG) ಮರುಪರೀಕ್ಷೆ ವೇಳೆ ಭಾರಿ ಅಕ್ರಮ ಬೆಳಕಿಗೆ ಬಂದಿದ್ದು, 9 ನಕಲಿ ಅಭ್ಯರ್ಥಿಗಳು ಸೇರಿದಂತೆ ಒಟ್ಟು 30 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಲಖಿಸರಾಯ್ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಪರೀಕ್ಷಾ ಕೇಂದ್ರಗಳ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಬೇರೆಯವರ ಹೆಸರಿನಲ್ಲಿ ಪರೀಕ್ಷೆ ಬರೆಯಲು ಬಂದಿದ್ದ 9 ನಕಲಿ ಅಭ್ಯರ್ಥಿಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮೂಲಗಳ ಮಾಹಿತಿ ಪ್ರಕಾರ, ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆದ ತಪಾಸಣೆಯಲ್ಲಿ ಒಟ್ಟು 30 ಮಂದಿ ಸಿಕ್ಕಿಬಿದ್ದಿದ್ದಾರೆ. ಇವರಲ್ಲಿ 9 ಮಂದಿ ನಕಲಿ ಅಭ್ಯರ್ಥಿಗಳಾಗಿದ್ದು, ಉಳಿದ 21 ಮಂದಿ ಪರೀಕ್ಷಾ ವಂಚನೆ ಜಾಲಕ್ಕೆ ಸಹಕಾರ ನೀಡಿದ ಆರೋಪದ ಮೇಲೆ ಬಂಧಿತರಾಗಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ಲಭ್ಯವಾದ ಮಾಹಿತಿಯ ಆಧಾರದ ಮೇಲೆ ವಿಶೇಷ ತನಿಖಾ ತಂಡವು ಈ ಅಕ್ರಮದ ಹಿಂದಿರುವ ಪ್ರಮುಖ ಆರೋಪಿಗಳು ಹಾಗೂ ಕಿಂಗ್‌ಪಿನ್‌ಗಳ ಪತ್ತೆಗೆ ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸುತ್ತಿದೆ.

ಪರೀಕ್ಷಾ ಪ್ರಕ್ರಿಯೆಯ ಪಾವಿತ್ರ್ಯಕ್ಕೆ ಧಕ್ಕೆ ತರುವ ಇಂತಹ ಅಕ್ರಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.

ನೀಟ್ ಅಭ್ಯರ್ಥಿಗಳಿಗೆ ತೊಂದರೆ ತಪ್ಪಿಸಲು ಏರ್‌ಪೋರ್ಟ್‌ನಲ್ಲೇ 45 ನಿಮಿಷ ಕಳೆದ ಪ್ರಧಾನಿ :
ನೀಟ್‌ (NEET UG 2026) ಅಭ್ಯರ್ಥಿಗಳಿಗೆ ತೊಂದರೆ ತಪ್ಪಿಸಲು ಪ್ರಧಾನಿ ನರೇಂದ್ರ ಮೋದಿಯವರು (Narendra Modi) ದೆಹಲಿ ವಿಮಾನ ನಿಲ್ದಾಣದಲ್ಲೇ (Delhi Airport) 45 ನಿಮಿಷಗಳ ಕಾಲ ತಮ್ಮ ಪ್ರಯಾಣವನ್ನು ಸ್ಥಗಿತಗೊಳಿಸಿ ಕಾದರು.

ಮೋದಿಯವರು ಯೋಗ ದಿನಾಚರಣೆ ಮುಗಿಸಿ ಕೋಲ್ಕತ್ತಾದಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಈ ವೇಳೆ ವಿದ್ಯಾರ್ಥಿಗಳು ನೀಟ್-ಯುಜಿ ಮರು ಪರೀಕ್ಷೆಗೆ ತೆರಳುತ್ತಿದ್ದರು. ಇದರಿಂದ ಸಂಚಾರ ಸುಗಮವಾಗಿಡಲು ಮತ್ತು ಅಭ್ಯರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿತ್ತು.

Share with Friends
author avatar
News Desk