Latestರಾಷ್ಟ್ರೀಯ-National

ಪಾಟ್ನಾಗೆ ಪಾಟಲಿಪುತ್ರ ಎಂದು ಮರುನಾಮಕರಣ ; ಬಿಹಾರದ ಸಿಎಂ ಸಾಮ್ರಾಟ್ ಚೌಧರಿ ಘೋಷಣೆ

ಪಾಟ್ನಾ, ಜೂನ್ 17: ಬಿಹಾರದ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಮಹತ್ವದ ಘೋಷಣೆಯೊಂದನ್ನು ಮಾಡಿದ್ದು, ಪಾಟ್ನಾದಲ್ಲಿ ನಿರ್ಮಾಣವಾಗಲಿರುವ ನೂತನ ಉಪನಗರಕ್ಕೆ ಐತಿಹಾಸಿಕ ಹೆಸರಾದ ‘ಪಾಟಲಿಪುತ್ರ’ ಎಂದು ನಾಮಕರಣ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಬಿಹಾರದ ರಾಜಧಾನಿ ಪಾಟ್ನಾ ಪ್ರಾಚೀನ ಭಾರತದ ಅತ್ಯಂತ ಪ್ರಮುಖ ನಗರಗಳಲ್ಲಿ ಒಂದಾಗಿದ್ದು, ಮೌರ್ಯ ಮತ್ತು ಗುಪ್ತ ಸಾಮ್ರಾಜ್ಯಗಳ ರಾಜಧಾನಿಯಾಗಿ ಪ್ರಸಿದ್ಧಿ ಪಡೆದಿತ್ತು. ಇತಿಹಾಸದಲ್ಲಿ ಈ ನಗರವನ್ನು ‘ಪಾಟಲಿಪುತ್ರ’ ಎಂದು ಕರೆಯಲಾಗುತ್ತಿತ್ತು. ಇದೇ ಕಾರಣದಿಂದ ಪಾಟ್ನಾ ನಗರಕ್ಕೆ ಅದರ ಪ್ರಾಚೀನ ಹೆಸರನ್ನು ಮರುಸ್ಥಾಪಿಸಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿದೆ.

ಬಿಜೆಪಿಯ ಹಲವು ನಾಯಕರು ಹಾಗೂ ಹಿಂದೂಪರ ಸಂಘಟನೆಗಳು ಪಾಟ್ನಾ ಸೇರಿದಂತೆ ಬಿಹಾರದ ಕೆಲವು ನಗರಗಳ ಹೆಸರನ್ನು ಬದಲಾಯಿಸುವಂತೆ ಆಗಾಗ ಒತ್ತಾಯಿಸುತ್ತಾ ಬಂದಿವೆ. ಉತ್ತರ ಪ್ರದೇಶದ ಅಲಹಾಬಾದ್ ನಗರವನ್ನು ‘ಪ್ರಯಾಗ್‌ರಾಜ್’ ಎಂದು ಮರುನಾಮಕರಣ ಮಾಡಿದ ಮಾದರಿಯಲ್ಲಿ ಪಾಟ್ನಾಕೂ ಐತಿಹಾಸಿಕ ಹೆಸರನ್ನು ನೀಡಬೇಕು ಎಂಬುದು ಅವರ ವಾದವಾಗಿದೆ.

ಆದರೆ, ಪಾಟ್ನಾ ನಗರದ ಹೆಸರನ್ನು ಅಧಿಕೃತವಾಗಿ ಬದಲಾಯಿಸುವ ಕುರಿತು ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದಿಂದ ಇದುವರೆಗೆ ಯಾವುದೇ ಅಧಿಕೃತ ನಿರ್ಧಾರ ಪ್ರಕಟವಾಗಿಲ್ಲ. ಯಾವುದೇ ನಗರದ ಹೆಸರು ಬದಲಾಯಿಸಲು ಮೊದಲು ರಾಜ್ಯ ಸಚಿವ ಸಂಪುಟದ ಅನುಮೋದನೆ ಅಗತ್ಯವಿದ್ದು, ಬಳಿಕ ಕೇಂದ್ರ ಗೃಹ ಸಚಿವಾಲಯ ಸೇರಿದಂತೆ ವಿವಿಧ ಇಲಾಖೆಗಳ ಅನುಮತಿ ಪಡೆಯಬೇಕಾಗುತ್ತದೆ.

‘ಪಾಟಲಿಪುತ್ರ’ ಎಂಬುದು ಮಗಧ ಸಾಮ್ರಾಜ್ಯದ ಐತಿಹಾಸಿಕ ರಾಜಧಾನಿಯಾಗಿದ್ದು, ಆರಂಭದಲ್ಲಿ ಈ ಪ್ರದೇಶವನ್ನು ‘ಪಾಟಲಿಗ್ರಾಮ’ ಎಂದು ಕರೆಯಲಾಗುತ್ತಿತ್ತು. ನಂತರ ಅದು ಬೆಳವಣಿಗೆಯಾಗಿ ‘ಪಾಟಲಿಪುತ್ರ’ವಾಗಿ ರೂಪುಗೊಂಡು, ಕಾಲಕ್ರಮೇಣ ಇಂದಿನ ‘ಪಾಟ್ನಾ’ ಎಂಬ ಹೆಸರನ್ನು ಪಡೆದುಕೊಂಡಿತು.

ಸುಮಾರು 3,000 ವರ್ಷಗಳ ಇತಿಹಾಸ ಹೊಂದಿರುವ ಪಾಟ್ನಾ ನಗರವು ಒಂದು ಕಾಲದಲ್ಲಿ ರಾಜಕೀಯ, ವ್ಯಾಪಾರ ಹಾಗೂ ಶಿಕ್ಷಣದ ಪ್ರಮುಖ ಕೇಂದ್ರವಾಗಿತ್ತು. ಚಂದ್ರಗುಪ್ತ ಮೌರ್ಯ ಹಾಗೂ ಸಾಮ್ರಾಟ್ ಅಶೋಕನಂತಹ ಮಹಾನ್ ಆಡಳಿತಗಾರರು ಇದೇ ಪ್ರದೇಶದಿಂದ ದೇಶವನ್ನು ಆಳಿದ್ದರು ಎಂಬುದು ಇತಿಹಾಸದ ಮಹತ್ವದ ಅಧ್ಯಾಯವಾಗಿದೆ.

Share with Friends
author avatar
News Desk