LatestTop Storiesರಾಷ್ಟ್ರೀಯ-National

ಜಮ್ಮುಕಾಶ್ಮೀರದಲ್ಲಿ ಭೀಕರ ಭೂಕುಸಿತ- 11 ಮಂದಿ ಬಲಿ, ಹಲವರ ನಾಪತ್ತೆ

ಜಮ್ಮುಕಾಶ್ಮೀರ ಜು.19- ಜಮ್ಮು ಮತ್ತು ಕಾಶ್ಮೀರದ ಪೂಂಚ್ ಹಾಗೂ ರಾಜೌರಿ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರೀ ಮಳೆ ಹಾಗೂ ಪ್ರವಾಹಕ್ಕೆ ಕನಿಷ್ಠ 11 ಮಂದಿ ಬಲಿಯಾಗಿದ್ದು, ಹಲವರು ನಾಪತ್ತೆಯಾಗಿದ್ದಾರೆ.

ಮಳೆಯಿಂದಾಗಿ ಭೀಕರ ಭೂಕುಸಿತ ಸಂಭವಿಸಿದ್ದು, ನೂರಾರು ಮನೆಗಳು ಜಲಾವೃತಗೊಂಡಿವೆ. ಕಣಿವೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳು ಹಾಗೂ ಸ್ಥಳೀಯ ಆಡಳಿತದ ವತಿಯಿಂದ ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಇದರ ಬೆನ್ನಲ್ಲೇ ಹವಾಮಾನ ಇಲಾಖೆ ಜುಲೈ 23ರವರೆಗೆ ಜಮ್ಮು-ಕಾಶ್ಮೀರದಾದ್ಯಂತ ಭಾರಿ ಮಳೆಯ ಮುನ್ಸೂಚನೆ ನೀಡಿದ್ದು, ರೆಡ್ ಅಲರ್ಟ್ ಘೋಷಿಸಿದೆ.

ಪೂಂಚ್ ಜಿಲ್ಲೆಯ ಸುರನ್‌ಕೋಟ್ ತಹಸಿಲ್‌ನಲ್ಲಿ ಭೀಕರ ಪರಿಸ್ಥಿತಿ ನಿರ್ಮಾಣವಾಗಿದೆ.ಇಲ್ಲಿನ ನೂನಾಬಂದಿ ಗ್ರಾಮದಲ್ಲಿ ಮನೆಯೊಂದು ಕುಸಿದು ಬಿದ್ದು 28 ವರ್ಷದ ನಾಜಿಯಾ ಕೌಸರ್ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ.ಆಕೆಯ ಪತಿ ಹಾಗೂ ಮೂವರು ಮಕ್ಕಳನ್ನು ಸ್ಥಳೀಯರು ರಕ್ಷಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಮ್ಮು ಕಾಶ್ಮೀರದಾದ್ಯಂತ ಭಾರಿ ಮಳೆಯ ಮುನ್ಸೂಚನೆ

ಲೋವರ್ ಮುರ್ರಾ ಭಾಗದಲ್ಲಿ ಸಂಭವಿಸಿದ ಮತ್ತೊಂದು ಭೀಕರ ಭೂಕುಸಿತದಲ್ಲಿ ಮೊಹಮ್ಮದ್ ಲತೀಫ್ ಎಂಬುವವರ ಇಡೀ ಮನೆ ಮಣ್ಣಿನ ಪಾಲಾಗಿದ್ದು, ಅವರ ಕುಟುಂಬದ 5 ಮಂದಿ ನಾಪತ್ತೆಯಾಗಿದ್ದಾರೆ. ಮರ್ಹೋಟೆ ಎಂಬಲ್ಲಿ ನಾಲೆ ದಾಟುತ್ತಿದ್ದ ಅಪ್ರಾಪ್ತ ಬಾಲಕಿ ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದರೆ, ಧುಂದಾಕ್ ಲಥೂಂಗ್ ಸೇತುವೆಯ ಬಳಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ.

ನೆರೆಯ ರಾಜೌರಿ ಜಿಲ್ಲೆಯಲ್ಲೂ ಪರಿಸ್ಥಿತಿ ಕೈಮೀರಿದ್ದು, ದರ್ಹಾಲಿ, ಖಾಂಡ್ಲಿ, ಸುಕ್ತೋಹ್ ಮತ್ತು ಜಮೋಲಾ ಸೇರಿದಂತೆ ಎಲ್ಲಾ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ದರ್ಹಾಲಿ ನದಿಯ ತಡೆಗೋಡೆ ಒಡೆದು ಪ್ರವಾಹದ ನೀರು ವಸತಿ ಪ್ರದೇಶಗಳಿಗೆ ನುಗ್ಗಿದೆ. ಬೇಲಾ ಕಾಲೋನಿಯ ಹೊಸ ಬಸ್ ನಿಲ್ದಾಣದ ಪಾರ್ಕಿಂಗ್ ವಲಯ ಜಲಾವೃತಗೊಂಡಿದ್ದು, ನೂರಾರು ವಾಹನಗಳು ಕೊಚ್ಚಿಹೋಗಿವೆ ಅಥವಾ ನೀರಿನಲ್ಲಿ ಮುಳುಗಿವೆ. ತಗ್ಗು ಪ್ರದೇಶಗಳ ನೂರಾರು ನಿವಾಸಿಗಳನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಪ್ರವಾಹ ಪರಿಸ್ಥಿತಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ, ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ತಮ್ಮ ದೆಹಲಿ ಪ್ರವಾಸವನ್ನು ಮೊಟಕುಗೊಳಿಸಿ ನೇರವಾಗಿ ಜಮ್ಮುಗೆ ಮರಳಿದ್ದಾರೆ. ಪರಿಸ್ಥಿತಿಯನ್ನು ಖುದ್ದಾಗಿ ಮೇಲ್ವಿಚಾರಣೆ ಮಾಡಲಿರುವುದಾಗಿ ಅವರು ತಿಳಿಸಿದ್ದಾರೆ.

ನದಿಯ ದಂಡೆ ಹಾಗೂ ಪ್ರವಾಹ ಪೀಡಿತ ಪ್ರದೇಶಗಳ ಬಳಿ ಸಾರ್ವಜನಿಕರು ಸುಳಿಯದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಅನಗತ್ಯ ಪ್ರಯಾಣವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ವಿಪತ್ತು ನಿರ್ವಹಣಾ ಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಧ್ವಂಸಗೊಂಡಿರುವ ರಸ್ತೆಗಳು ಮತ್ತು ಮಣ್ಣಿನ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ.

Share with Friends
author avatar
Digital Desk