
ರಾಯಚೂರು ಬ್ರೇಕಿಂಗ್ | ಆಸ್ಪತ್ರೆಯಲ್ಲಿ ಖೈದಿ ಆತ್ಮಹತ್ಯೆ: ಟಿಬಿ ರೋಗದಿಂದ ಬೇಸತ್ತಿದ್ದ ಪವನ್ ಕುಮಾರ್..!
ರಾಯಚೂರು: ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದ ಖೈದಿಯೊಬ್ಬರು ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತ ಖೈದಿಯನ್ನು ಹುಬ್ಬಳಿ ಮೂಲದ ಪವನ್ ಕುಮಾರ್ (32) ಎಂದು ಗುರುತಿಸಲಾಗಿದೆ. ಲಿಂಗಸುಗೂರು ತಾಲೂಕಿನ ಮರ್ಡರ್ ಕೇಸಿನಲ್ಲಿ ಆರೋಪಿಯಾಗಿದ್ದ ಪವನ್ ಕುಮಾರ್ಗೆ ಟಿಬಿ ರೋಗ ಹಾಗೂ ಅನ್ನನಾಳದಲ್ಲಿ ರಕ್ತಸ್ರಾವದ ಸಮಸ್ಯೆ ಇತ್ತು.

ರೋಗದ ಸಮಸ್ಯೆಗೆ ಬೇಸತ್ತಿದ್ದ ಆತನನ್ನು ಚಿಕಿತ್ಸೆಗಾಗಿ ಜುಲೈ 22 ರಂದು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ಖೈದಿಗಳ ವಾರ್ಡ್ ಒಂದರಲ್ಲಿ ಕಾವಲು ಇಡಲಾಗಿತ್ತು.
ಸೋಮವಾರ ಶೌಚಾಲಯಕ್ಕೆ ಹೋಗಿದ್ದ ಪವನ್ ಕುಮಾರ್ ಬರಲು ತಡವಾಗುತ್ತಿದ್ದಂತೆ ಕಾವಲು ಅಧಿಕಾರಿಗಳಿಗೆ ಅನುಮಾನ ಬಂದಿದೆ. ತಕ್ಷಣ ಶೌಚಾಲಯ ಪರಿಶೀಲಿಸಿದಾಗ ಪವನ್ ಕುಮಾರ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ತಕ್ಷಣ ವೈದ್ಯರು ಪರೀಕ್ಷಿಸಿ ಆತ ಮೃತಪಟ್ಟಿರುವುದನ್ನು ದೃಢಪಡಿಸಿದರು. ಮಾಹಿತಿ ತಿಳಿಯುತ್ತಿದ್ದಂತೆ ರಿಮ್ಸ್ ಆಸ್ಪತ್ರೆಗೆ ಜಿಲ್ಲಾ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂಬಂಧ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
