ಜಿಲ್ಲಾ ಸುದ್ದಿಗಳು | District News

ಯಾದಗಿರಿ : ಕೆಮಿಕಲ್ ಫ್ಯಾಕ್ಟರಿಗಳ ವಿಷಕಾರಿ ನೀರಿನಿಂದ ಜಲಚರಗಳ ಮಾರಣಹೋಮ, ಜೀವಜಲಕ್ಕೂ ಕುತ್ತು

ಯಾದಗಿರಿ: ಕೆಮಿಕಲ್ ಫ್ಯಾಕ್ಟರಿಯಲ್ಲಿ ಗ್ಯಾಸ್ ಲೀಕ್ ಆಗಿ ಮೂವರು ಕಾರ್ಮಿಕರು ದುರ್ಮರಣಕ್ಕೀಡಾದ ಘಟನೆ ಮಾಸುವ ಮುನ್ನವೇ ಯಾದಗಿರಿ ತಾಲೂಕಿನ ಕಡೇಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದಿಂದ ಮತ್ತೊಂದು ಗಂಭೀರ ಸಮಸ್ಯೆ ಎದುರಾಗಿದೆ. ಕೈಗಾರಿಕಾ ಪ್ರದೇಶದಿಂದ ಹೊರಬರುತ್ತಿರುವ ವಿಷಕಾರಿ ದ್ರವ ಹಳ್ಳ-ಕೊಳ್ಳಗಳಿಗೆ ಸೇರುತ್ತಿದ್ದು, ಬಾಡಿಯಾಳ ಹಳ್ಳದಲ್ಲಿ ಮೀನುಗಳು ಹಾಗೂ ಜಲಚರಗಳು ಸಾಮೂಹಿಕವಾಗಿ ಸಾವನ್ನಪ್ಪಿರುವ ಆರೋಪ ಕೇಳಿಬಂದಿದೆ.

ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿರುವ ಕೆಮಿಕಲ್ ಫ್ಯಾಕ್ಟರಿಗಳಿಂದ ವಿಷಕಾರಿ ದ್ರವವನ್ನು ಚರಂಡಿಗಳ ಮೂಲಕ ಹಳ್ಳಗಳಿಗೆ ಹರಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಳೆದ ಒಂದು ವಾರದಿಂದ ಹಳ್ಳದಲ್ಲಿ ಮೀನುಗಳು ಸತ್ತು ಬೀಳುತ್ತಿದ್ದು, ಸತ್ತ ಮೀನುಗಳಿಂದ ದುರ್ವಾಸನೆ ಹರಡಿದೆ. ಇದರಿಂದ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕ ಗ್ರಾಮಸ್ಥರಲ್ಲಿ ಮೂಡಿದೆ.

ಜನ-ಜಾನುವಾರುಗಳ ಜೀವಕ್ಕೂ ಅಪಾಯ..!?

ಬಾಡಿಯಾಳ ಗ್ರಾಮದ ಜನರು ಹಾಗೂ ಜಾನುವಾರುಗಳು ದಿನನಿತ್ಯದ ಬಳಕೆಗೆ ಈ ಹಳ್ಳದ ನೀರನ್ನೇ ಅವಲಂಬಿಸಿದ್ದರು. ಅಲ್ಲದೇ, ಜಮೀನುಗಳಲ್ಲಿನ ಬೆಳೆಗಳಿಗೆ ನೀರುಣಿಸಲು ಕೂಡ ಹಳ್ಳದ ನೀರನ್ನು ಬಳಸಲಾಗುತ್ತಿತ್ತು. ಇದೀಗ ನೀರು ಕಲುಷಿತವಾಗಿರುವ ಹಿನ್ನೆಲೆಯಲ್ಲಿ ಜನರು ಹಾಗೂ ರೈತರು ಆತಂಕಕ್ಕೊಳಗಾಗಿದ್ದಾರೆ.

ಕೈಗಾರಿಕಾ ಪ್ರದೇಶದಿಂದ ಹೊರಬರುತ್ತಿರುವ ತ್ಯಾಜ್ಯದಿಂದ ಹಳ್ಳದ ನೀರು ಕಲುಷಿತವಾಗುತ್ತಿದೆ ಎಂಬ ಆರೋಪದ ನಡುವೆ, ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಜೀವಜಲವೇ ವಿಷಪೂರಿತವಾಗುತ್ತಿರುವುದರಿಂದ ಗ್ರಾಮಸ್ಥರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬ್ರಿಜ್ ಕಂ ಬ್ಯಾರೇಜ್ ನಿರ್ಮಿಸಿ ನಿರ್ವಹಣೆ ಮರೆತ ಅಧಿಕಾರಿಗಳು?

ರೈತರ ನೀರಿನ ಅಗತ್ಯಕ್ಕಾಗಿ 2013ರಲ್ಲಿ ಬಾಡಿಯಾಳ ಹಳ್ಳಕ್ಕೆ ಬ್ರಿಜ್ ಕಂ ಬ್ಯಾರೇಜ್ ನಿರ್ಮಿಸಲಾಗಿತ್ತು. ಆದರೆ, ನಿರ್ಮಾಣದ ಬಳಿಕ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಸಮರ್ಪಕ ನಿರ್ವಹಣೆ ಮಾಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಬ್ಯಾರೇಜ್ ಹಾಗೂ ಹಳ್ಳದ ನೀರಿನ ನಿರ್ವಹಣೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ಮತ್ತಷ್ಟು ಉಲ್ಬಣವಾಗಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಕೆಮಿಕಲ್ ಫ್ಯಾಕ್ಟರಿಗಳಿಂದ ಹೊರಬರುವ ತ್ಯಾಜ್ಯವನ್ನು ಸಮರ್ಪಕವಾಗಿ ಸಂಸ್ಕರಿಸದೆ ಹಳ್ಳಗಳಿಗೆ ಹರಿಸಲಾಗುತ್ತಿದೆಯೇ ಎಂಬುದರ ಬಗ್ಗೆ ಅಧಿಕಾರಿಗಳು ತಕ್ಷಣ ಪರಿಶೀಲನೆ ನಡೆಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕೈಗಾರಿಕೆಗಳಿಗೆ ಪರಿಸರ ಸಂರಕ್ಷಣೆ ಹಾಗೂ ತ್ಯಾಜ್ಯ ವಿಲೇವಾರಿ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ, ನಿಯಮ ಉಲ್ಲಂಘಿಸುವ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಅಕ್ರಮ ತ್ಯಾಜ್ಯ ವಿಲೇವಾರಿ ಕುರಿತು ಸಮಗ್ರ ತನಿಖೆ ನಡೆಸಿ, ಜನರು, ರೈತರು ಹಾಗೂ ಜಲಚರಗಳ ರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಬಾಡಿಯಾಳ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Share with Friends
author avatar
News Desk