
ಮಕ್ಕಳಂತೆ ಬೆಳೆಸಿದ್ದ 40ಕ್ಕೂ ಹೆಚ್ಚು ಅಡಿಕೆ ಸಸಿಗಳನ್ನು ಕತ್ತರಿಸಿ ಹಾಕಿದ ದುಷ್ಕರ್ಮಿಗಳು
ತುಮಕೂರು: ಜಿಲ್ಲೆಯ ಗುಬ್ಬಿ ತಾಲೂಕಿನ ಹಾಗಲವಾಡಿ ಹೋಬಳಿಯ ಹೊಸಕೆರೆಯಲ್ಲಿ ಮನಕಲಕುವ ಘಟನೆ ಬೆಳಕಿಗೆ ಬಂದಿದೆ. ರೈತ ಮಹಿಳೆಯೊಬ್ಬರು ಕಷ್ಟಪಟ್ಟು ಬೆಳೆಸಿದ್ದ 40ಕ್ಕೂ ಹೆಚ್ಚು ಅಡಿಕೆ ಸಸಿಗಳನ್ನು ದುಷ್ಕರ್ಮಿಗಳು ರಾತ್ರೋರಾತ್ರಿ ಕಡಿದು ಹಾಕಿರುವ ಘಟನೆ ನಡೆದಿದೆ.
ಹಾಗಲವಾಡಿ ಹೋಬಳಿಯ ಹೊಸಕೆರೆ ಗ್ರಾಮದ ರಾಜೇಶ್ವರಿ ಎಂಬ ರೈತ ಮಹಿಳೆ ತಮ್ಮ ಜಮೀನಿನಲ್ಲಿ ಬ್ಯಾಂಕ್ ಸಾಲ ಹಾಗೂ ಕೈ ಸಾಲ ಮಾಡಿಕೊಂಡು 40ಕ್ಕೂ ಹೆಚ್ಚು ಅಡಿಕೆ ಸಸಿಗಳನ್ನು ನೆಟ್ಟು, ಮಕ್ಕಳಂತೆ ಸಾಕಿ ಬೆಳೆಸುತ್ತಿದ್ದರು. ಆದರೆ, ಕಳೆದ ರಾತ್ರಿ ಜಮೀನಿಗೆ ನುಗ್ಗಿದ ಕಿಡಿಗೇಡಿಗಳು ಅಡಿಕೆ ಸಸಿಗಳನ್ನು ಕತ್ತರಿಸಿ ಹಾಕಿದ್ದಾರೆ.
ಜೀವನೋಪಾಯಕ್ಕಾಗಿ ಸಾಲ-ಸೋಲ ಮಾಡಿ ತೋಟ ನಿರ್ಮಿಸಿದ್ದ ರಾಜೇಶ್ವರಿ, ಬೆಳಗ್ಗೆ ಜಮೀನಿಗೆ ತೆರಳಿದಾಗ ಗಿಡಗಳೆಲ್ಲ ನೆಲಸಮವಾಗಿರುವುದನ್ನು ಕಂಡು ಕಂಗಾಲಾಗಿದ್ದಾರೆ. ವರ್ಷಗಳ ಪರಿಶ್ರಮ ಹಾಗೂ ತಮ್ಮ ಬದುಕಿನ ಆಸರೆಯಾಗಿದ್ದ ಅಡಿಕೆ ಸಸಿಗಳು ನಾಶವಾಗಿರುವುದನ್ನು ಕಂಡು ಕಣ್ಣೀರಿಟ್ಟಿದ್ದಾರೆ.
ತಮಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಡುವಂತೆ ರೈತ ಮಹಿಳೆ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ. ಇಂತಹ ಹೇಯ ಕೃತ್ಯ ಎಸಗಿರುವ ಸಮಾಜಘಾತಕ ಶಕ್ತಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಅಲ್ಲದೆ, ದುಷ್ಕರ್ಮಿಗಳ ಕೃತ್ಯದಿಂದ ನಷ್ಟಕ್ಕೊಳಗಾಗಿರುವ ತಮ್ಮ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ರೈತ ಮಹಿಳೆ ಕಣ್ಣೀರಿನ ಮನವಿ ಮಾಡಿದ್ದಾರೆ. ಕಷ್ಟಪಟ್ಟು ಬೆಳೆಸಿದ ತೋಟವನ್ನೇ ಕ್ಷಣಾರ್ಧದಲ್ಲಿ ನಾಶಪಡಿಸಿರುವ ಕಿಡಿಗೇಡಿಗಳ ವಿರುದ್ಧ ಪೊಲೀಸರು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
