
ಬಸ್ಸಲ್ಲಿ ಕಿಸ್ ಕೊಟ್ಟ ಅಂಕಲ್‌ಗೆ ಹಿಗ್ಗಾಮುಗ್ಗಾ ಥಳಿಸಿದ ಮಹಿಳೆ
ಕೋಲಾರ: ಪಕ್ಕದ ಸೀಟ್‌ನಲ್ಲಿ ಕುಳಿತಿದ್ದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರಿಗೆ ಮಹಿಳೆ ಹಾಗೂ ಸಹ ಪ್ರಯಾಣಿಕರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಡೆದಿದೆ.
ಕೋಲಾರದಿಂದ ಬಂಗಾರಪೇಟೆಗೆ ತೆರಳುತ್ತಿದ್ದ KA-51-F-4452 ಸಂಖ್ಯೆಯ ಪ್ಯಾಸೆಂಜರ್ ಸಾರಿಗೆ ಬಸ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಪಕ್ಕದ ಸೀಟ್‌ನಲ್ಲಿ ಕುಳಿತಿದ್ದ ಮಹಿಳೆಯ ಕೈ ಮುಟ್ಟಿ, ಬಳಿಕ ಆಕೆಯ ಕೈಗೆ ಮುತ್ತು ನೀಡಲು ವ್ಯಕ್ತಿ ಮುಂದಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಇದರಿಂದ ಆಕ್ರೋಶಗೊಂಡ ಮಹಿಳೆ ಕೂಡಲೇ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡು ಥಳಿಸಿದ್ದಾರೆ. ಬಳಿಕ ಬಸ್‌ನಲ್ಲಿದ್ದ ಕೆಲ ಸಹ ಪ್ರಯಾಣಿಕರೂ ಮಹಿಳೆಯ ಪರ ನಿಂತು ವ್ಯಕ್ತಿಗೆ ಧರ್ಮದೇಟು ನೀಡಿದ್ದಾರೆ ಎನ್ನಲಾಗಿದೆ.
ತನ್ನನ್ನು ಬಿಟ್ಟುಬಿಡುವಂತೆ ಹಾಗೂ ತನಗೆ ಮಗು ಇದೆ ಎಂದು ವ್ಯಕ್ತಿ ಮನವಿ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಆದರೂ ಪರಿಸ್ಥಿತಿ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಆತ ಬಸ್‌ನಿಂದ ಜಿಗಿದು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಇನ್ನೊಂದೆಡೆ, ಮಹಿಳೆಯ ಕಾಲು ಮುಟ್ಟಿ ಕ್ಷಮೆಯಾಚಿಸಿದರೂ ಸಹ ಪ್ರಯಾಣಿಕರು ಆತನನ್ನು ಬಿಡಲಿಲ್ಲ ಎನ್ನಲಾಗಿದೆ. ಕೆಜಿಎಫ್ ಮೂಲದ ವ್ಯಕ್ತಿಗೆ ಬಂಗಾರಪೇಟೆ ಮೂಲದ ಮಹಿಳೆ ಥಳಿಸಿರುವ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
