Health | ಆರೋಗ್ಯ

ಕಿವಿ ಸ್ವಚ್ಛತೆ ಬಗ್ಗೆ ಎಚ್ಚರಿಕೆ: ಪಿನ್‌, ಬಡ್ಸ್‌ ಬಳಕೆ ಅಪಾಯಕಾರಿ;

ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ. ದೇಹ ಮತ್ತು ಮನಸ್ಸಿನ ಸ್ವಚ್ಛತೆಯ ಜೊತೆಗೆ ಕಿವಿಯ ಆರೋಗ್ಯಕ್ಕೂ ಹೆಚ್ಚಿನ ಗಮನ ನೀಡಬೇಕು. ಆದರೆ ಕಿವಿಯನ್ನು ಸ್ವಚ್ಛಗೊಳಿಸುವ ಹೆಸರಿನಲ್ಲಿ ಕೆಲವರು ಪಿನ್‌, ಕಾಟನ್‌ ಬಡ್ಸ್‌, ಬೆರಳು ಸೇರಿದಂತೆ ವಿವಿಧ ವಸ್ತುಗಳನ್ನು ಕಿವಿಯೊಳಗೆ ಹಾಕುವುದು ಅಥವಾ ನೀರು, ಸಾಬೂನು ನೀರನ್ನು ಸುರಿದು ಸ್ವಚ್ಛಗೊಳಿಸಲು ಮುಂದಾಗುತ್ತಾರೆ. ಇಂತಹ ಅಭ್ಯಾಸಗಳಿಂದ ಕಿವಿಗೆ ಹಲವು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಕಿಂಡರ್‌ ಆಸ್ಪತ್ರೆಯ ಇಎನ್‌ಟಿ ತಜ್ಞೆ ಡಾ. ಸುನಿತಾ ಮಾಧವನ್‌ ಅವರ ಪ್ರಕಾರ, ಕಿವಿಯ ಸ್ವಚ್ಛತೆಗಾಗಿ ಇತ್ತೀಚೆಗೆ ಇಂತಹ ಅಪಾಯಕಾರಿ ವಿಧಾನಗಳನ್ನು ಅನುಸರಿಸಿ ಸಮಸ್ಯೆಗೊಳಗಾಗುವವರ ಸಂಖ್ಯೆ ಹೆಚ್ಚಾಗಿದೆ.

ಪ್ರತಿದಿನ ಕಿವಿ ಸ್ವಚ್ಛಗೊಳಿಸಬೇಕೇ?

ಕಿವಿ ತನ್ನನ್ನು ತಾನೇ ಸ್ವಚ್ಛಗೊಳಿಸಿಕೊಳ್ಳುವ ನೈಸರ್ಗಿಕ ವ್ಯವಸ್ಥೆಯನ್ನು ಹೊಂದಿದೆ. ಕಿವಿಯಲ್ಲಿ ಉತ್ಪತ್ತಿಯಾಗುವ ವ್ಯಾಕ್ಸ್‌ ಕ್ರಮೇಣ ತಾನಾಗಿಯೇ ಹೊರಬರುತ್ತದೆ. ಹೀಗಾಗಿ ಪ್ರತಿದಿನ ಕಿವಿಯೊಳಗೆ ಬಡ್ಸ್‌ ಅಥವಾ ಪಿನ್‌ ಹಾಕಿ ಸ್ವಚ್ಛಗೊಳಿಸುವ ಅಗತ್ಯವಿಲ್ಲ. ಕಿವಿಯ ಹೊರಭಾಗದಲ್ಲಿ ಕಸ ಕಂಡುಬಂದರೆ ಮೃದುವಾದ ಬಟ್ಟೆಯಿಂದ ನಿಧಾನವಾಗಿ ಒರೆಸಿದರೆ ಸಾಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಪ್ರತಿದಿನ ಕಿವಿ ಸ್ವಚ್ಛಗೊಳಿಸುವುದರಿಂದ ಏನು ಸಮಸ್ಯೆ?

ಕಿವಿಯ ಒಳಭಾಗ ಅತ್ಯಂತ ಸೂಕ್ಷ್ಮವಾಗಿರುತ್ತದೆ. ಪದೇಪದೇ ಕಿವಿಯನ್ನು ಸ್ವಚ್ಛಗೊಳಿಸುವುದರಿಂದ ಒಳಪದರಕ್ಕೆ ಹಾನಿಯಾಗಬಹುದು. ಇದರಿಂದ ಸೋಂಕು, ತುರಿಕೆ ಹಾಗೂ ಗಾಯಗಳಂತಹ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ.ಅಲ್ಲದೆ, ಕಲುಷಿತ ನೀರಿನಲ್ಲಿ ಈಜುವುದರಿಂದಲೂ ಕಿವಿಗೆ ಸೋಂಕು ಉಂಟಾಗಬಹುದು. ಕಿವಿಯೊಳಗೆ ಪಿನ್‌ ಅಥವಾ ಕಾಟನ್‌ ಬಡ್ಸ್‌ ಹಾಕುವುದರಿಂದ ಸೋಂಕಿನ ಅಪಾಯ ಮತ್ತಷ್ಟು ಹೆಚ್ಚಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಕಿವಿ ಸ್ವಚ್ಛತೆ ಬಗ್ಗೆ ವೈದ್ಯರ ಸಲಹೆ ಏನು?

*ತಲೆ ಸ್ನಾನ ಮಾಡುವಾಗ ಕಿವಿಯ ಹೊರಭಾಗಕ್ಕೆ ನೀರು ನೇರವಾಗಿ ಹೋಗದಂತೆ ಎಚ್ಚರಿಕೆ ವಹಿಸಿ.
*ಕಿವಿಯಲ್ಲಿ ತುರಿಕೆ ಅಥವಾ ಇತರ ಸಮಸ್ಯೆಗಳು ಕಂಡುಬಂದರೆ ಅದು ಕೇವಲ ವ್ಯಾಕ್ಸ್‌ನಿಂದಲೇ ಉಂಟಾಗಿದೆ ಎಂದು ಭಾವಿಸಬೇಡಿ. ಒಣಗುವಿಕೆ ಹಾಗೂ ಅಲರ್ಜಿಯಿಂದಲೂ ಸಮಸ್ಯೆ ಉಂಟಾಗಬಹುದು.
*ವೈದ್ಯರ ಸಲಹೆಯಿಲ್ಲದೆ ಕಿವಿಯೊಳಗೆ ಯಾವುದೇ ಔಷಧಿ ಅಥವಾ ದ್ರವವನ್ನು ಹಾಕಬೇಡಿ.
*ಶೀತದ ಸಂದರ್ಭದಲ್ಲಿ ಕಿವಿ ಬ್ಲಾಕ್‌ ಆಗಿದ್ದರೆ ವೈದ್ಯರನ್ನು ಸಂಪರ್ಕಿಸಿ.
*ಕಿವಿಯ ಹೊರಭಾಗದಲ್ಲಿ ಕಸ ಕಂಡುಬಂದರೆ ಮೃದುವಾದ ಬಟ್ಟೆಯಿಂದ ಮಾತ್ರ ಸ್ವಚ್ಛಗೊಳಿಸಿ.

ಕಿವಿ ಸ್ವಚ್ಛಗೊಳಿಸುವಾಗ ಏನು ಮಾಡಬಾರದು?

*ಪ್ರತಿದಿನ ಕಿವಿ ಸ್ವಚ್ಛಗೊಳಿಸುವ ಅಭ್ಯಾಸ ಮಾಡಿಕೊಳ್ಳಬೇಡಿ.
*ಕಿವಿಯೊಳಗೆ ಕಾಟನ್‌ ಬಡ್ಸ್‌, ಪಿನ್‌, ಬೆರಳು ಅಥವಾ ಯಾವುದೇ ವಸ್ತುಗಳನ್ನು ಹಾಕಬೇಡಿ.
*ಕಿವಿಯಲ್ಲಿ ಸಮಸ್ಯೆ ಕಂಡುಬಂದರೆ ಸ್ವಯಂ ಔಷಧಿ ಬಳಸಬೇಡಿ.
*ಮಧುಮೇಹ ಇರುವವರು ಕಿವಿ ಸಂಬಂಧಿತ ಸಮಸ್ಯೆ ಕಂಡುಬಂದರೆ ಹೆಚ್ಚಿನ ಮುತುವರ್ಜಿ ವಹಿಸಿ.
*ಕಿವಿ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿರುವವರು ನೀರಿನ ಚಟುವಟಿಕೆಗಳಿಂದ ದೂರವಿರಿ.

Share with Friends
author avatar
News Desk