
28 ಕೋಟಿ ವೆಚ್ಚದ ತರಕಾರಿ ಮಾರುಕಟ್ಟೆ ಸಂಕೀರ್ಣ: 11 ತಿಂಗಳಾದರೂ ಉದ್ಘಾಟನೆಯ ಭಾಗ್ಯ ಇಲ್ಲ..!
ಕಲಬುರಗಿ: ಕಲಬುರಗಿ ನಗರದ M.S.K ಮೀಲ್ ರಸ್ತೆಯಲ್ಲಿ ಸುಮಾರು 28 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾದ ನೂತನ ತರಕಾರಿ ಮಾರುಕಟ್ಟೆ ಸಂಕೀರ್ಣ ಪೂರ್ಣಗೊಂಡು 11 ತಿಂಗಳು ಕಳೆದರೂ ಇನ್ನೂ ಉದ್ಘಾಟನೆಯ ಭಾಗ್ಯ ದೊರೆಯದೆ ತರಕಾರಿ ವ್ಯಾಪಾರಸ್ಥರು ಪರದಾಡುವಂತಾಗಿದೆ.
K.K.R.D.B ಯಿಂದ 21.70 ಕೋಟಿ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದಿಂದ 6.30 ಕೋಟಿ ಸೇರಿ ಒಟ್ಟು 28 ಕೋಟಿ ರೂ. ವೆಚ್ಚದಲ್ಲಿ P.W.D ಇಲಾಖೆ ಮೂಲಕ ಈ ಕಟ್ಟಡ ಕಾಮಗಾರಿ ಗುತ್ತಿಗೆ ಆಧಾರದಲ್ಲಿ ನಡೆದಿತ್ತು. ಅನುದಾನದ ಕೊರತೆ ಹಾಗೂ ಸರ್ಕಾರದ ಬದಲಾವಣೆಯಿಂದ ಕಾಮಗಾರಿ ಸರಿಯಾಗಿ ಮುಕ್ತಾಯವಾಗಿರಲಿಲ್ಲ.

ನಿತ್ಯವೂ 350ಕ್ಕೂ ಹೆಚ್ಚು ವ್ಯಾಪಾರಿಗಳು ತರಕಾರಿ ಮಾರಾಟ ಮಾಡುವ ಈ ಮಾರುಕಟ್ಟೆಗೆ ಕಟ್ಟಡ ಸಿದ್ಧವಾಗಿದ್ದರೂ ಇನ್ನೂ ಮಳಿಗೆಗಳನ್ನು ಹಂಚಿಕೆ ಮಾಡಿಲ್ಲ. ಇದರಿಂದಾಗಿ ವ್ಯಾಪಾರಿಗಳು ಇಂದಿಗೂ ರಸ್ತೆ ಬದಿಯಲ್ಲಿಯೇ ತರಕಾರಿ ಮಾರಾಟ ಮಾಡುವಂತಾಗಿದೆ. ಮಳೆಗಾಲದಲ್ಲಿ ರಸ್ತೆಗಳು ಕೆಸರು ಗದ್ದೆಯಂತಾಗುತ್ತಿದ್ದು, ವ್ಯಾಪಾರಕ್ಕೂ ಭಾರೀ ತೊಂದರೆಯಾಗುತ್ತಿದೆ.
ತಕ್ಷಣವೇ ನೂತನ ತರಕಾರಿ ಮಾರುಕಟ್ಟೆ ಸಂಕೀರ್ಣವನ್ನು ಉದ್ಘಾಟಿಸಿ ಮಳಿಗೆಗಳನ್ನು ತರಕಾರಿ ವ್ಯಾಪಾರಸ್ಥರಿಗೆ ಹಂಚಿಕೆ ಮಾಡಿಕೊಡಬೇಕೆಂದು ವ್ಯಾಪಾರಸ್ಥರು ಆಗ್ರಹಿಸಿದ್ದಾರೆ. ಕಟ್ಟಡ ಕಾಮಗಾರಿ ಮುಗಿದು ದೀರ್ಘ ಸಮಯವಾದರೂ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಗಳು ನಿರ್ಲಕ್ಷ್ಯ ತೋರುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದ.
