
ಶಾಲೆಯಲ್ಲಿ ಶೌಚಾಲಯ ಭಾಗ್ಯವಿಲ್ಲ, ಕಿಡಿಗೇಡಿಗಳ ಹಾವಳಿ : ಅಳಲು ತೋಡಿಕೊಂಡ ಶಿಕ್ಷಕ.
ಬೆಳಗಾವಿ: ಬೆಳಗಾವಿಜಿಲ್ಲೆಯ ಹುಕ್ಕೇರಿ ತಾಲೂಕಿನ ಎಲ್ಲಿಮುನ್ನೋಳಿ ಗ್ರಾಮದ ಸರ್ಕಾರಿ ಶಾಲೆಯ ದಯನೀಯ ಸ್ಥಿತಿ. ಎಲ್ಲಿಮುನ್ನೋಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಆನಂದ್ ಕೆಂಪಣ್ಣ ಹುದ್ದಾರ ಅವರು ಶಾಲೆಯ ದುಸ್ಥಿತಿ ಹಾಗೂ ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕಣ್ಣೀರು ಹರಿಯದ ಕೊರಗಿನಿಂದ ಮಾಹಿತಿ ಹಂಚಿಕೊಂಡಿದ್ದಾರೆ. 1984ರ ಸಮಯದಲ್ಲಿ ಪ್ರಾರಂಭಗೊಂಡ ಈ ಶಾಲೆಯಲ್ಲಿ ಪ್ರಸ್ತುತ 204 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ (ಕಳೆದ ವರ್ಷ 220 ಮಕ್ಕಳಿದ್ದರು).
ಆದರೆ ಇಷ್ಟೊಂದು ಸಂಖ್ಯೆಯ ಮಕ್ಕಳಿಗೆ ಇರುವುದು ಕೇವಲ ಒಂದೇ ಒಂದು ಶೌಚಾಲಯ. ಹೆಣ್ಣುಮಕ್ಕಳು ಹಾಗೂ ಗಂಡುಮಕ್ಕಳು ಸರದಿಯ ಸಾಲಿನಲ್ಲಿ ನಿಂತು ಶೌಚಾಲಯ ಬಳಸಬೇಕಾದ ದುಸ್ಥಿತಿ ಬಂದೊದಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡ್ರು. ಇನ್ನು ಕಳೆದ 5-6 ವರ್ಷಗಳ ಹಿಂದೆ ಪಂಚಾಯಿತಿ ವತಿಯಿಂದ ನೂತನ ಶೌಚಾಲಯ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ವರ್ಷಗಳು ಉರುಳಿದರೂ ಈ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಅಂತಾರೆ ಮುಖ್ಯಶಿಕ್ಷಕ ಆನಂದ ಹುದ್ದಾರ.

ಶಾಲೆಯ ಸಮಯ ಮುಗಿದ ನಂತರ ಸ್ಥಳೀಯ ಕಿಡಿಗೇಡಿಗಳು ಹಾಗೂ ಯುವಕರು ಶಾಲಾ ಆವರಣಕ್ಕೆ ನುಗ್ಗಿ ಪುಂಡಾಟ ನಡೆಸುತ್ತಿದ್ದಾರೆ. ಶಾಲೆಗೆ ಹಾಕುವ ಗೇಟ್ ಮತ್ತು ಬೀಗಗಳನ್ನು ಮುರಿದು ಹಾಕಿ ಆವರಣವನ್ನು ಹಾಳು ಮಾಡುತ್ತಿದ್ದಾರೆ. ಸುಮಾರು 30 ರಿಂದ 40 ಬೀಗಗಳನ್ನು ಈಗಾಗಲೇ ಕಿಡಿಗೇಡಿಗಳು ಮುರಿದು ಹಾಕಿದ್ದಾರಂತೆ. ಶಾಲೆಯ ಆವರಣದಲ್ಲಿ ಗುಟ್ಕಾ ತಿಂದು ಉಗುಳುವುದು, ಮದ್ಯಪಾನ ಹಾಗೂ ಅನೈತಿಕ ಚಟುವಟಿಕೆಗಳನ್ನು ನಡೆಸಿ ಆವರಣವನ್ನು ಅಶುಚಿ ಮಾಡುತ್ತಿದ್ದಾರೆ.
ಶಿಕ್ಷಕರೇ ಶೌಚಾಲಯ ತೊಳೆಯುವ ಸ್ಥಿತಿ ನಿರ್ಮಾಣವಾಗಿದೆ.ಶಾಲೆಯಲ್ಲಿ ಪೌರಕಾರ್ಮಿಕರು ಇಲ್ಲದಿರುವುದರಿಂದ, ಶಾಲೆಯ ಅವಧಿ ಮುಗಿದ ನಂತರ ಶಿಕ್ಷಕರೇ ಸ್ವತಃ ನೀರು ಹಾಕಿ ಶೌಚಾಲಯಗಳನ್ನು ತೊಳೆಯುವ ಪರಿಸ್ಥಿತಿ ಬಂದಿದೆ. ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನಹರಿಸಿ ಅನುದಾನ ಬಿಡುಗಡೆ ಮಾಡಬೇಕು. ಶಾಲಾ ಮಕ್ಕಳಿಗೆ ಅಗತ್ಯವಿರುವ ನೂತನ ಶೌಚಾಲಯ ಹಾಗೂ ಮೂಲಸೌಕರ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಮುಖ್ಯ ಶಿಕ್ಷಕ ಆನಂದ್ ಹುದ್ದಾರ ಮನವಿ ಮಾಡಿದ್ದಾರೆ.ಭವಿಷ್ಯದ ಪ್ರಜೆಗಳನ್ನು ರೂಪಿಸುವ ಶಾಲೆಯಲ್ಲೇ ಈ ರೀತಿಯ ದುಸ್ಥಿತಿ ಇದ್ದರೆ ಶಿಕ್ಷಣ ವ್ಯವಸ್ಥೆ ಎತ್ತ ಸಾಗುತ್ತಿದೆ? ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಳ್ಳುತ್ತಾರಾ? ಕಾದು ನೋಡಬೇಕಿದೆ.
