BlogLatestರಾಜ್ಯ-Karnataka

ಮಾಜಿ ಸಚಿವ, ಕೆ.ಎಚ್‌. ಶ್ರೀನಿವಾಸ್‌ ನಿಧನ, ಗಣ್ಯರಿಂದ ಸಂತಾಪ

ಬೆಂಗಳೂರು: ಶಿವಮೊಗ್ಗಹಾಗೂ ಸಾಗರ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ, ಹಿರಿಯ ರಾಜಕಾರಣಿ ಕೆ.ಎಚ್‌ಶ್ರೀನಿವಾಸ್‌ (86) ನಿಧನರಾಗಿದ್ದಾರೆ. ಕೆ. ಎಚ್. ಶ್ರೀನಿವಾಸ್ ನಿಧನದ ಬಗ್ಗೆ ಪುತ್ರಿ ವೈಶಾಲಿ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ. “ಅಪಾರ ದುಃಖದಿಂದ ನಾನು ನಿಮಗೆ ನನಗಾದ ದೊಡ್ಡ ನಷ್ಟದ ಬಗ್ಗೆ ತಿಳಿಸುತ್ತೇನೆ. ನನ್ನ ತಂದೆ ಕೆ.ಎಚ್. ಶ್ರೀನಿವಾಸ್ ಅವರು ಇನ್ನಿಲ್ಲ. ಅವರು ಇಂದು ಬೆಳಗ್ಗೆ 11 ಗಂಟೆಗೆ ನಮ್ಮ ನಿವಾಸದಲ್ಲಿ ನಿಧನರಾದರು” ಎಂದು ತಿಳಿಸಿದ್ದಾರೆ.

ಕೆ.ಎಚ್‌ಶ್ರೀನಿವಾಸ್‌ ಅವರ ನಿಧಾನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. “ಮಾಜಿ ಸಚಿವರು, ಜನತಾ ಪರಿವಾರದ ಹಿರಿಯ ನಾಯಕರು ಆದ ಕೆ.ಹೆಚ್.ಶ್ರೀನಿವಾಸ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ರಾಜಕೀಯದ ಜೊತೆಗೆ ಕಲೆ, ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಬಹುಮುಖಿ ವ್ಯಕ್ತಿ ಶ್ರೀನಿವಾಸ್ ಅವರು ಹಳೆಯ ಮತ್ತು ಹೊಸ ತಲೆಮಾರಿನ ರಾಜಕಾರಣದ ಕೊಂಡಿಯಾಗಿದ್ದರು. ಮೃತರ ಆತ್ಮಕ್ಕೆ ಚಿರಶಾಂತಿ ದೊರಕಲಿ, ಅವರ ಕುಟುಂಬವರ್ಗಕ್ಕೆ ನೋವು ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ” ಎಂದು ಸಿಎಂ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. .

ಸಾಗರ ತಾಲ್ಲೂಕು ಕಾನುಗೋಡು ಗ್ರಾಮದವರಾದ ಶ್ರೀನಿವಾಸ್‌ ಜನತಾಪರಿವಾರದಲ್ಲಿ ಗುರುತಿಸಿಕೊಂಡಿದ್ದರು. ಆನಂತರ ಕಾಂಗ್ರೆಸ್‌ನಲ್ಲೂ ಇದ್ದರು. ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಅವರ ಆಪ್ತರಾಗಿದ್ದ ಅವರು ಸಾಂಸ್ಕೃತಿಕ ವಲಯದಲ್ಲೂ ಗುರುತಿಸಿಕೊಂಡಿದ್ದರು. ವಕೀಲರಾಗಿ. ಕೃಷಿಕರೂ ಆಗಿದ್ದರು. ಕವನ ಸಂಕಲನಗಳನ್ನೂ ರಚಿಸಿದ್ದ ಅವರು ಸಿನಿಮಾದಲ್ಲೂ ಅಭಿನಯಿಸಿದ್ದರು.

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಕಾನುಗೋಡು ಗ್ರಾಮದಲ್ಲಿ 1938ರ ಫೆಬ್ರವರಿ 5ರಂದು ಜನಿಸಿದರು. ಸಾಗರ, ಶಿವಮೊಗ್ಗದಲ್ಲಿ ಶಿಕ್ಷಣ ಪಡೆದಿದ್ದರು. ಕೃಷಿಕರಾಗಿ, ವಕೀಲರಾಗಿದ್ದುಕೊಂಡೇ ರಾಜಕೀಯ ಪ್ರವೇಶಿಸಿದ್ದರು. ಕೆಲವು ದಿನಗಳ ಕಾಲ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು.

ಹೈಕೋರ್ಟ್‌ನಲ್ಲಿ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ವಕೀಲರಾಗಿಯೂ ಸೇವೆ ಸಲ್ಲಿಸಿದ್ದರು. ಹಲವಾರು ಸಾಮಾಜಿಕ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಕಾನೂನು ಸಲಹೆಗಾರರಾಗಿ ನೇಮಕಗೊಂಡು ಸಾಮಾಜಿಕವಾಗಿ ಗುರುತಿಸಿಕೊಂಡಿದ್ದರು. ಸಾಗರ ತಾಲೂಕು ಮತ್ತು ಸುತ್ತಮುತ್ತ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದಲ್ಲಿ ಅಧ್ಯಕ್ಷರಾಗಿ ಹಾಗೂ ಶಿವಮೊಗ್ಗದ ಸಹ್ಯಾದ್ರಿ ಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

Share with Friends
author avatar
News Desk