BlogLatestTop Storiesವಿದೇಶ-International

ಐಎಸ್​ಐನ ಮಾಜಿ ಮುಖ್ಯಸ್ಥನನ್ನ ಬಂಧಿಸಿದ ಪಾಕ್ ಸೇನೆ

ಇಸ್ಲಾಮಾಬಾದ್: ಪಾಕಿಸ್ತಾನದ ಐಎಸ್​ಐನ ಮಾಜಿ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ ಅವರನ್ನು ಅಲ್ಲಿನ ಮಿಲಿಟರಿ ಬಂಧಿಸಿದೆ. ಪಾಕಿಸ್ತಾನದಲ್ಲಿ ಐಎಸ್‌ಐನ ಮಾಜಿ ಮುಖ್ಯಸ್ಥರನ್ನು ಬಂಧಿಸಿರುವುದು ಇದೇ ಮೊದಲು.

ಟಾಪ್ ಸಿಟಿ ಪ್ರಕರಣದಲ್ಲಿ ಫೈಜ್ ಹಮೀದ್ ವಿರುದ್ಧ ದೂರು ದಾಖಲಾಗಿತ್ತು. ಕಳೆದ ವರ್ಷ ನವೆಂಬರ್ 14ರಂದು ಪಾಕಿಸ್ತಾನಿ ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಫೈಜ್ ಹಮೀದ್ ವಿರುದ್ಧದ ಆರೋಪಗಳನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಹೇಳಿತ್ತು. ಪ್ರಕರಣದಲ್ಲಿ ಮಾಡಿದ ದೂರಿನ ಸತ್ಯಾಸತ್ಯತೆ ತಿಳಿಯಲು ಪಾಕಿಸ್ತಾನ ಸೇನೆಯು ವಿವರವಾದ ತನಿಖೆಯನ್ನು ನಡೆಸಿತು ಎಂದು ಪಿಟಿಐ ವರದಿ ಮಾಡಿದೆ.

ಫೈಜ್ ಹಮೀದ್, ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ನಿಕಟವರ್ತಿ ಎಂದು ಪರಿಗಣಿಸಲಾಗಿದೆ. ಇಮ್ರಾನ್ ಖಾನ್ ಅವರ ಸರ್ಕಾರದ ಅವಧಿಯಲ್ಲಿ ಫೈಜ್ ಹಮೀದ್ ಅವರನ್ನು ಮುಂದಿನ ಸೇನಾ ಮುಖ್ಯಸ್ಥರನ್ನಾಗಿ ಮಾಡುವ ಬಗ್ಗೆಯೂ ಚರ್ಚೆ ನಡೆದಿತ್ತು, ಆದರೆ ಇಮ್ರಾನ್​ಖಾನ್​ ಅವರ ಬಂಧನದಿಂದ ಈ ವಿಷಯ ಯಶಸ್ವಿಯಾಗಲಿಲ್ಲ ಎನ್ನಲಾಗಿದೆ.

ಫೈಜ್ ಹಮೀದ್ ಪೇಶಾವರ ಕಾರ್ಪ್ಸ್ ಕಮಾಂಡರ್ ಆಗಿಯೂ ಸೇವೆ ಸಲ್ಲಿಸಿದ್ದರು. ಫೀಲ್ಡ್ ಜನರಲ್ ಕೋರ್ಟ್ ಮಾರ್ಷಲ್ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದ್ದು, ಲೆಫ್ಟಿನೆಂಟ್ ಜನರಲ್ (ನಿವೃತ್ತ) ಫೈಜ್ ಹಮೀದ್ ಅವರನ್ನು ಮಿಲಿಟರಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ISPR ಪ್ರಕಟಣೆಯಲ್ಲಿ ತಿಳಿಸಿದೆ.

ಇದಲ್ಲದೆ ನಿವೃತ್ತಿಯ ನಂತರ ಪಾಕಿಸ್ತಾನ ಸೇನಾ ಕಾಯ್ದೆಯ ಉಲ್ಲಂಘನೆ ಮಾಡಿರುವ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ISPR ಹೇಳಿದೆ. ಫೈಜ್ ಹಮೀದ್ ಅಧಿಕಾರ ದುರುಪಯೋಗ ಮಾಡಿರುವ ಆರೋಪಗಳನ್ನು ತನಿಖೆ ಮಾಡಲು ಮಿಲಿಟರಿ ಏಪ್ರಿಲ್‌ನಲ್ಲಿ ತನಿಖಾ ಸಮಿತಿಯನ್ನು ರಚಿಸಿತ್ತು ಎಂದು ವರದಿಯಾಗಿದೆ.

Share with Friends
author avatar
News Desk