Latestಬೆಂಗಳೂರು-Bengaluru

‘ನನ್ನ ಖಾತೆ, ನನ್ನ ಹಕ್ಕು’ ಯೋಜನೆಗೆ ಅಧಿಕಾರಿಗಳ ವಿಳಂಬದ ಅಡ್ಡಿ?

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ‘ನನ್ನ ಖಾತೆ, ನನ್ನ ಹಕ್ಕು’ ಯೋಜನೆಗೆ ಅಧಿಕಾರಿಗಳ ವಿಳಂಬವೇ ಅಡ್ಡಿಯಾಗಿದೆಯೇ ಎಂಬ ಆರೋಪಗಳು ಕೇಳಿಬಂದಿವೆ.

ಬಿ-ಖಾತೆಯಿಂದ ಎ-ಖಾತೆಗೆ ಪರಿವರ್ತನೆ ಮಾಡಿಕೊಳ್ಳಲು ಸರ್ಕಾರ ಅವಕಾಶ ಕಲ್ಪಿಸಿದ್ದರೂ, ಸಾವಿರಾರು ಅರ್ಜಿಗಳು ಅಧಿಕಾರಿಗಳ ಲಾಗಿನ್‌ನಲ್ಲೇ ಬಾಕಿ ಉಳಿದಿವೆ ಎನ್ನಲಾಗಿದೆ. ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬ, ಜಿಪಿಎಸ್ ಟ್ಯಾಗಿಂಗ್‌ನಲ್ಲಿ ಅಕ್ರಮ ಹಾಗೂ ಲಂಚದ ಬೇಡಿಕೆ ಸೇರಿದಂತೆ ಹಲವು ಗಂಭೀರ ಆರೋಪಗಳು ಕೇಳಿಬಂದಿವೆ.

ಬಿ-ಖಾತೆಯಿಂದ ಎ-ಖಾತೆಗೆ ಪರಿವರ್ತನೆ ಮಾಡಿಕೊಳ್ಳಲು ಸರ್ಕಾರ ನೀಡಿರುವ ಸುವರ್ಣಾವಕಾಶವನ್ನು ಬಳಸಿಕೊಳ್ಳಲು ಅರ್ಜಿ ಸಲ್ಲಿಸಿರುವ ಬೆಂಗಳೂರಿನ ಜನರು, ಅರ್ಜಿಗಳ ವಿಲೇವಾರಿಗಾಗಿ ಕಚೇರಿಗಳಿಗೆ ಅಲೆದಾಡುವಂತಾಗಿದೆ ಎಂಬ ಆರೋಪವಿದೆ.

ನಗರದಲ್ಲಿ ಇದುವರೆಗೆ 57 ಸಾವಿರಕ್ಕೂ ಅಧಿಕ ಮಂದಿ ಎ-ಖಾತೆಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಈ ಪೈಕಿ ಸುಮಾರು 20 ಸಾವಿರ ಅರ್ಜಿಗಳಷ್ಟೇ ವಿಲೇವಾರಿಯಾಗಿದ್ದು, 37 ಸಾವಿರಕ್ಕೂ ಅಧಿಕ ಅರ್ಜಿಗಳು ಇನ್ನೂ ಬಾಕಿ ಉಳಿದಿವೆ ಎನ್ನಲಾಗಿದೆ.

ಅರ್ಜಿಗಳಿಗೆ ಅನುಮತಿ ನೀಡದೆ ಉದ್ದೇಶಪೂರ್ವಕವಾಗಿ ಪೆಂಡಿಂಗ್ ಇಟ್ಟುಕೊಂಡು ಲಂಚಕ್ಕೆ ಬೇಡಿಕೆ ಇಡಲಾಗುತ್ತಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಮತ್ತೊಂದೆಡೆ, ಸರ್ಕಾರ ನಿಗದಿಪಡಿಸಿರುವ ಮಾರ್ಗಸೂಚಿ ಬೆಲೆಯ ಶೇಕಡಾ 2ರಷ್ಟು ದರದ ಆಧಾರದ ಮೇಲೆ ಪ್ರಕ್ರಿಯೆ ನಡೆಯಬೇಕಿದೆ. ಆದರೆ ಕೆಲವು ಅಧಿಕಾರಿಗಳು ಮಾರ್ಗಸೂಚಿ ಬೆಲೆಗಿಂತ ಹೆಚ್ಚಿನ ಮೊತ್ತಕ್ಕೆ ಜಿಪಿಎಸ್ ಟ್ಯಾಗ್ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಒಟ್ಟಿನಲ್ಲಿ, ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಜಾರಿಗೊಳಿಸಿರುವ ‘ನನ್ನ ಖಾತೆ, ನನ್ನ ಹಕ್ಕು’ ಯೋಜನೆಯಲ್ಲೇ ಅಧಿಕಾರಿಗಳ ವಿಳಂಬ ಹಾಗೂ ಅಕ್ರಮದ ಆರೋಪಗಳು ಕೇಳಿಬಂದಿರುವುದು ಚರ್ಚೆಗೆ ಗ್ರಾಸವಾಗಿದೆ.

ಎ-ಖಾತೆಗಾಗಿ ಅರ್ಜಿ ಸಲ್ಲಿಸಿ ಕಚೇರಿಗಳಿಗೆ ಅಲೆದಾಡುತ್ತಿರುವ ಜನರಿಗೆ ಯಾವಾಗ ಮುಕ್ತಿ ಸಿಗಲಿದೆ? ಅಧಿಕಾರಿಗಳ ವಿರುದ್ಧ ಕೇಳಿಬಂದಿರುವ ಆರೋಪಗಳ ಬಗ್ಗೆ ಜಿಬಿಎ ಯಾವ ಕ್ರಮ ಕೈಗೊಳ್ಳಲಿದೆ? ಎಂಬುದು ಇದೀಗ ಕುತೂಹಲ ಮೂಡಿಸಿದೆ.

Share with Friends
author avatar
News Desk