
ಬಿಡದಿ ಟೌನ್ಶಿಪ್ ಜಟಾಪಟಿ : ಜೆಡಿಎಸ್ ಪಾದಯಾತ್ರೆಗೆ ಯೂತ್ ಕಾಂಗ್ರೆಸ್ ಸ್ಟಿಕರ್ ದಾಳಿ
ಬೆಂಗಳೂರು: ಬಿಡದಿ ಟೌನ್ಶಿಪ್ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಹಮ್ಮಿಕೊಂಡಿದ್ದ ಪಾದಯಾತ್ರೆ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಮೂರು ದಿನಗಳ ಕಾಲ ನಡೆಯಬೇಕಿದ್ದ ಜೆಡಿಎಸ್ ಪಾದಯಾತ್ರೆ ಎರಡನೇ ದಿನಕ್ಕೆ ಮೊಟಕುಗೊಂಡ ಬೆನ್ನಲ್ಲೇ, ಯೂತ್ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಕಚೇರಿಗೆ ತೆರಳಿ ಸ್ಟಿಕರ್ಗಳನ್ನು ಅಂಟಿಸಿ ವ್ಯಂಗ್ಯವಾಡಿದ್ದಾರೆ.
ಜೆಡಿಎಸ್ ಭವನದಲ್ಲಿ ಅಂಟಿಸಲಾದ ಸ್ಟಿಕರ್ಗಳಲ್ಲಿ “ಇದು ಬಿಡದಿ ಹೋರಾಟವೇ? ನಿಮ್ಮ ಬೇನಾಮಿ ಆಸ್ತಿ ರಕ್ಷಿಸುವ ಹೋರಾಟವೇ?”, “ಜೆಡಿಎಸ್ ಪಾದಯಾತ್ರೆ ಬೇನಾಮಿ ಉಳಿಸೋ ಯಾತ್ರೆ..!” ಎಂಬ ಬರಹಗಳ ಮೂಲಕ ಜೆಡಿಎಸ್ ವಿರುದ್ಧ ಟೀಕೆ ಮಾಡಲಾಗಿದೆ.
ಅಲ್ಲದೇ, “ಬೇನಾಮಿ ಆಸ್ತಿ ಬಿಡಿ, ಆಮೇಲೆ ರೈತರ ಪರವಾಗಿ ಮಾತನಾಡಿ” ಹಾಗೂ “ಆಹಾ ಏನ್ ಗುರು ಸಾಂಕೇತಿಕ ಬೆಂಬಲನಾ?” ಎಂಬ ಬರಹಗಳನ್ನೂ ಸ್ಟಿಕರ್ಗಳಲ್ಲಿ ಮುದ್ರಿಸಲಾಗಿದೆ.
ಬಿಡದಿ ಟೌನ್ಶಿಪ್ ವಿಚಾರವಾಗಿ ಜೆಡಿಎಸ್ ನಡೆಸುತ್ತಿರುವ ಹೋರಾಟಕ್ಕೆ ತಿರುಗೇಟು ನೀಡುವ ಉದ್ದೇಶದಿಂದಲೇ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಈ ರೀತಿಯ ಸ್ಟಿಕರ್ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ರಾಜಕೀಯ ವಾಗ್ವಾದ ಮತ್ತಷ್ಟು ತೀವ್ರಗೊಂಡಿದೆ.
