BlogLatestTop Storiesರಾಜಕೀಯ | Politicsರಾಜ್ಯ-Karnataka

ಚನ್ನಪಟ್ಟಣದಲ್ಲಿ ಎನ್​ಡಿಎ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ

ಚನ್ನಪಟ್ಟಣ : ಚನ್ನಪಟ್ಟಣ ಉಪಚುನಾವಣೆಗೆ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಶುಕ್ರವಾರ ನಾಮಪತ್ರ ಸಲ್ಲಿಸಿದರು. ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಜೆಡಿಎಸ್-ಬಿಜೆಪಿ ನಾಯಕರ ಸಮ್ಮುಖದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಬಳಿಕ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಇನ್ನು ದೋಸ್ತಿ ನಾಯಕರು ಚನ್ನಪಟ್ಟಣ ನಗರದಲ್ಲಿ ಅಬ್ಬರದ ರೋಡ್ ಶೋ ನಡೆಸಿದರು. ಶೇರ್ವಾ ಸರ್ಕಲ್​ನಿಂದ ತಾಲೂಕು ಕಚೇರಿವರೆಗೆ ಬೃಹತ್ ರೋಡ್ ಶೋ ನಡೆಸಿದರು.

ಈ ವೇಳೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಿಎಂ ಸದಾನಂದಗೌಡ, ಮಾಜಿ ಡಿಸಿಎಂ ಅಶ್ವಥ್ ನಾರಾಯಣಗೌಡ, ಸಂಸದ ಡಾ.ಮಂಜುನಾಥ್ ಸೇರಿ ಜೆಡಿಎಸ್‌ನ ಶಾಸಕರು, ಮಾಜಿ ಸಚಿವರು ಭಾಗಿಯಾಗಿದ್ದರು. ಅಲ್ಲದೇ ಬಿಜೆಪಿ ಹಾಗೂ ಜೆಡಿಎಸ್‌ನ ಸುಮಾರು 20 ಸಾವಿರ ಕಾರ್ಯಕರ್ತರು ರೋಡ್ ಶೋನಲ್ಲಿ ಭಾಗವಹಿಸಿದ್ದರು.

ರೋಡ್ ಶೋ ಬಳಿಕ ತಾಲೂಕು ಕಚೇರಿಗೆ ಆಗಮಿಸಿ ನಿಖಿಲ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ವೇಳೆ ನಿಖಿಲ್‌ಗೆ ಹೆಚ್‌ಡಿಕೆ, ಆರ್.ಅಶೋಕ್, ಸದಾನಂದಗೌಡ, ಬಿ.ವೈ.ರಾಘವೇಂದ್ರ ಸಾಥ್ ನೀಡಿದ್ದಾರೆ. ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಿಖಿಲ್, ಈ ಬಾರಿ ಚಕ್ರವ್ಯೂಹ ಬೇಧಿಸುವ ಶಕ್ತಿ ಚನ್ನಪಟ್ಟಣದ ಜನ ನೀಡುತ್ತಾರೆ. ಹಣ ಬಲ, ತೋಳ್ಬಲ ಯಾವುದೂ ನಡೆಯಲ್ಲ. ಚನ್ನಪಟ್ಟಣ ಜನ ನಮ್ಮ ಅಭಿವೃದ್ಧಿ ಕೆಲಸಗಳಿಗೆ ನಮಗೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸ ಇದೆ ಎಂದರು. 

ನಾಮಪತ್ರ ಸಲ್ಲಿಕೆಗೆ ಮುನ್ನ ದೇವರ ಮೊರೆ :
ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಗೆ ಎನ್ ಡಿ ಎ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮುನ್ನ ಶ್ರೀ ನಿಖಿಲ್ ಕುಮಾರಸ್ವಾಮಿ ಅವರು ಕುಟುಂಬದೊಂದಿಗೆ ಜೆ.ಪಿ ನಗರದಲ್ಲಿರುವ ಶ್ರೀ ತಿರುಮಲಗಿರಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯಕ್ಕೆ ತೆರಳಿ ಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸಲಾಯಿತು. ನಂತರ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಾಜಿ ಪ್ರಧಾನಿಗಳಾದ ಶ್ರೀ ಹೆಚ್.ಡಿ ದೇವೇಗೌಡರ ಆಶೀರ್ವಾದ ಪಡೆದುಕೊಂಡರು. ಚನ್ನಪಟ್ಟಣ ಕೆಂಗಲ್ ಆಂಜನೇಯ ದೇವಸ್ಥಾನಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಮಾಡಿಸಿದ್ದಾರೆ. ಇನ್ನು ಮೊಮ್ಮಗನಿಗೆ ಒಳ್ಳೆಯದಾಗಲಿ ಎಂದು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರು ಪ್ರಾರ್ಥನೆ ಸಲ್ಲಿಸಿದ್ದಾರೆ.

ಈ ಬಾರಿ ಚನ್ನಪಟ್ಟಣದ ಜನ ಬಲಿಯಾಗಲ್ಲ: ಕುಮಾರಸ್ವಾಮಿ
ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಅವರು ಪುತ್ರನ ಎರಡು ಚುನಾವಣೆಗಳನ್ನ ನೆನೆಪು ಮಾಡಿಕೊಂಡರು. ಕಾಂಗ್ರೆಸ್ ಕುತಂತ್ರಕ್ಕೆ ಈ ಹಿಂದೆ ನಿಖಿಲ್ ಸೋತಿದ್ದರು. ಈ ಬಾರಿ ಚನ್ನಪಟ್ಟಣದ ಜನ ಬಲಿಯಾಗಲ್ಲ ಎನ್ನುವ ಮೂಲಕ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

ಯೋಗೇಶ್ವರ್ ಹರಕೆಯ ಕುರಿ :
ನಿಖಿಲ್ ಕುಮಾರಸ್ವಾಮಿ ಬೆನ್ನಿಗೆ ಬಿಜೆಪಿ ನಾಯಕರು ಪ್ರಬಲವಾಗಿ ನಿಂತಿದ್ದಾರೆ. ಇವತ್ತು ರಾಮನಗರದಲ್ಲಿ ಸುದ್ದಿ ಗೋಷ್ಠಿ ಕೂಡ ನಡೆಸಿ, ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶ ಸಾರಿದ್ದಾರೆ. ಇದೇ ವೇಳೆ, ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಸಿಪಿವೈ ಚರ್ಚೆ ಕೂಡ ಮುನ್ನೆಲೆಗೆ ಬಂದಿದೆ. ಸಿಪಿವೈ ನಿರ್ಗಮನದಿಂದ ಬಿಜೆಪಿಗೆ ಹಿನ್ನಡೆ ಆಗಿದೆ ಎಂದು ಅಶ್ವತ್ಥನಾರಾಯಣ ಒಪ್ಪಿಕೊಂಡರೆ, ಯೋಗೇಶ್ವರ್ ಹರಕೆಯ ಕುರಿ ಎಂದು ಅಶೋಕ್ ಹೇಳಿದರು.

ಶಿಗ್ಗಾಂವಿಯಲ್ಲಿ ಬಿಜೆಪಿ ಅಭ್ಯರ್ಥಿಗಳು ಶಕ್ತಿ ಪ್ರದರ್ಶನ :
ಈ ನಡುವೆ ಸಂಡೂರು ಮತ್ತು ಶಿಗ್ಗಾಂವಿಯಲ್ಲಿ ಬಿಜೆಪಿ ಅಭ್ಯರ್ಥಿಗಳು ಶಕ್ತಿ ಪ್ರದರ್ಶನ ಮಾಡಿದ್ದಾರೆ. ಸಂಡೂರಿನಲ್ಲಿ ಬಂಗಾರು ಹನುಮಂತು ವಿಜಯೇಂದ್ರ ನೇತೃತ್ವದಲ್ಲಿ ಅಬ್ಬರದ ರೋಡ್ ಶೋ ನಡೆಸಿದರೆ, ಶಿಗ್ಗಾಂವಿಯಲ್ಲಿ ಭರತ್ ಬೊಮ್ಮಾಯಿ ಕೂಡ ಮೆರವಣಿಗೆ ಮಾಡಿ, ತಮ್ಮ ನಾಯಕರ ಸಮ್ಮುಖದಲ್ಲಿ ಉಮೇದುವಾರಿಕೆ ಸಲ್ಲಿಸಿದರು.

ಗುರುವಾರವಷ್ಟೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿಪಿ ಯೋಗೇಶ್ವರ್ ನಾಮಪತ್ರ ಸಲ್ಲಿಸಿದ್ದರು. ಇದೀಗ ಎನ್​ಡಿಎ ಅಭ್ಯರ್ಥಿ ನಾಮಪತ್ರ ಸಲ್ಲಿಕೆಯೊಂದಿಗೆ ಚನ್ನಪಟ್ಟಣದ ಚುನಾವಣಾ ಅಖಾಡ ರಂಗೇರಿದೆ.

Share with Friends
author avatar
News Desk