ಜೆಡಿಯು ವಕ್ತಾರ ಸ್ಥಾನಕ್ಕೆ ಕೆಸಿ ತ್ಯಾಗಿ ರಾಜೀನಾಮೆ
ಪಾಟ್ನಾ : ಜೆಡಿಯು ಪಕ್ಷದ ವಕ್ತಾರ ಸ್ಥಾನಕ್ಕೆ ಕೆಸಿ ತ್ಯಾಗಿ ರಾಜೀನಾಮೆ ನೀಡಿದ್ದಾರೆ. ಹೊಸ ರಾಷ್ಟ್ರೀಯ ವಕ್ತಾರರಾಗಿ ರಾಜೀವ್ ರಂಜನ್ ಪ್ರಸಾದ್ ಅವರು ತ್ಯಾಗಿ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ.
ಇತ್ತೀಚೆಗೆ ವಿವಿಧ ವಿಷಯಗಳ ಕುರಿತು ಕೆಸಿ ತ್ಯಾಗಿ ಅವರು ನೀಡಿರುವ ಹೇಳಿಕೆಗಳಿಂದ ನಾಯಕತ್ವದ ಅಸಮಾಧಾನಗೊಂಡಿತ್ತು ಈ ಹಿನ್ನೆಲೆ ರಾಜೀನಾಮೆ ನೀಡಲಾಗಿದೆ ಎಂದು ಮೂಲಗಳು ಸೂಚಿಸಿವೆ. ಪಕ್ಷದ ನಾಯಕತ್ವಕ್ಕೆ ಬರೆದ ಪತ್ರದಲ್ಲಿ ತ್ಯಾಗಿ ತಮ್ಮ ರಾಜೀನಾಮೆಗೆ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿದ್ದಾರೆ.
ಇಸ್ರೇಲ್-ಪ್ಯಾಲೆಸ್ತೀನ್ ಸಮಸ್ಯೆ ಮತ್ತು ಲ್ಯಾಟರಲ್ ಎಂಟ್ರಿ ವಿವಾದ ಸೇರಿದಂತೆ ಅವರ ಇತ್ತೀಚಿನ ಹೇಳಿಕೆಗಳು ಪಕ್ಷದ ನಿಲುವಿಗಿಂತ ಭಿನ್ನವಾಗಿತ್ತು.ತ್ಯಾಗಿ ಅವರು ನಾಯಕರನ್ನು ಸಂಪರ್ಕಿಸದೆ ಹೇಳಿಕೆಗಳನ್ನು ನೀಡಿದ್ದಾರೆ ಮತ್ತು ಅವರ ಹೇಳಿಕೆಗಳಿಂದಾಗಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದಲ್ಲಿ (ಎನ್‌ಡಿಎ) ಭಿನ್ನಾಭಿಪ್ರಾಯಗಳ ಬಗ್ಗೆ ಮಾತುಕತೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದ್ದಾರೆ.
ಕೋಟಾವನ್ನು ಹೆಚ್ಚಿಸುವ ರಾಜ್ಯ ಸರ್ಕಾರದ ತಿದ್ದುಪಡಿಗಳನ್ನು ರದ್ದುಗೊಳಿಸಿದ ಪಾಟ್ನಾ ಹೈಕೋರ್ಟ್‌ನ ಆದೇಶಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ ನಂತರ ಪ್ರತಿಕ್ರಿಯಿಸಿದ ತ್ಯಾಗಿ, ಜೆಡಿಯು ದೇಶದಲ್ಲಿ ಜಾತಿ ಆಧಾರಿತ ಜನಗಣತಿ ಪರವಾಗಿದೆ ಎಂದು ಹೇಳಿದ್ದರು.
ತ್ಯಾಗಿ ಈ ವಿಷಯಗಳ ಬಗ್ಗೆ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಪಕ್ಷದ ಅಭಿಪ್ರಾಯದಂತೆ ಆಗಾಗ ಮಂಡಿಸುತ್ತಿದ್ದರು ಎಂದು ಜೆಡಿಯು ಮೂಲಗಳು ಆರೋಪಿಸಿವೆ.
