LatestTop Storiesರಾಜಕೀಯ | Politicsರಾಜ್ಯ-Karnataka

ಮುಂದಿನ ವಾರ ಸಂಪುಟ ವಿಸ್ತರಣೆ, 7-8 ಮಂದಿ ಹೊಸಬರಿಗೆ ಸಚಿವ ಪಟ್ಟ?

ಬೆಂಗಳೂರು, ಜು.11- ಸಚಿವ ಸಂಪುಟ ವಿಸ್ತರಣೆಗೆ ಕಾಂಗ್ರೆಸ್‌ನಲ್ಲಿ ಒತ್ತಡಗಳು ಹೆಚ್ಚಾಗಿರುವಾಗಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಾಳೆ ಇಲ್ಲವೆ ನಾಡಿದ್ದು ದೆಹಲಿಗೆ ತೆರಳಿ, ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿ ಮಾಡಲಿದ್ದಾರೆ.
ವಿದೇಶ ಪ್ರವಾಸದಲ್ಲಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿ ನಾಳೆ ಬೆಳಗ್ಗೆ ವಿದೇಶದಿಂದ ವಾಪಸ್ಸಾಗಲಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಾಳೆ ಇಲ್ಲವೆ ನಾಡಿದ್ದು, ದೆಹಲಿಗೆ ತೆರಳಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಿ, ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿ ಮಾಡುವರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಸಹ ದೆಹಲಿಗೆ ತೆರಳಲಿದ್ದು, ಎಲ್ಲರೂ ವರಿಷ್ಠರ ಜತೆ ಕುಳಿತು ನೂತನ ಸಚಿವರ ಪಟ್ಟಿಯನ್ನು ಅಂತಿಮಗೊಳಿಸುವರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ಒಂದು ಸುತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ,ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಇವರುಗಳ ಜತೆ ಚರ್ಚೆ ನಡೆಸಿ ಸಂಪುಟ ವಿಸ್ತರಣೆಗೆ ವೇದಿಕೆ ಸಿದ್ಧಪಡಿಸಿಕೊಂಡಿದ್ದಾರೆ. ಸಚಿವರ ಪಟ್ಟಿಯೂ ಅಂತಿಮವಾಗಿದ್ದು, ರಾಹುಲ್‌ಗಾಂಧಿ ಅವರ ಅಂಕಿತ ದೊರೆತ ತಕ್ಷಣವೇ ಸಂಪುಟ ವಿಸ್ತರಣೆಯಾಗಲಿದೆ.
ಈ ತಿಂಗಳ 15 ರಿಂದ ಆಷಾಢಮಾಸ ಆರಂಭವಾಗಲಿದ್ದು, ಅಷ್ಟರೊಳಗೆ ಸಂಪುಟ ವಿಸ್ತರಿಸುವ ಇರಾದೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೊಂದಿದ್ದು, ಒಂದು ವೇಳೆ 15 ರೊಳಗೆ ಸಚಿವರ ಪಟ್ಟಿಗೆ ವರಿಷ್ಠರ ಅಂಕಿತ ಸಿಗದಿದ್ದರೆ ಆಷಾಢ ಮಾಸ ಎಂಬುದನ್ನು ನೋಡದೆ ಈ ವಾರದ ಅಂತ್ಯದಲ್ಲಿ ಅಥವಾ ಮುಂದಿನ ವಾರದ ಆರಂಭದಲ್ಲಿ ಸಂಪುಟ ವಿಸ್ತರಣೆಯಾದರೂ ಅಚ್ಚರಿ ಇಲ್ಲ. ಆಷಾಢಮಾಸ ಇವನ್ನೆಲ್ಲಾ ಕಾಂಗ್ರೆಸ್ ವರಿಷ್ಠರು ಹೆಚ್ಚು ನಂಬದ ಕಾರಣ ಆಷಾಢ ಯಾವುದನ್ನು ಲೆಕ್ಕಿಸದೆ ಸಂಪುಟ ವಿಸ್ತರಣೆ ಅವರು ಹಸಿರು ನಿಶಾನೆ ತೋರಲಿದ್ದಾರೆ ಎಂದು ಹೇಳಲಾಗಿದೆ.
ಆಷಾಢದಲ್ಲೇ ಸಂಪುಟ ವಿಸ್ತರಣೆಯಾದರೆ ಆಷಾಢ ಇವನ್ನೆಲ್ಲಾ ನಂಬುವವರು ಸ್ವಲ್ಪ ಇರಿಸು ಮುರಿಸಿಗೆ ಒಳಗಾಗಲಿದ್ದಾರೆ.
ಜೂನ್. 3 ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜತೆ 13 ಸಚಿವರು ಸಂಪುಟ ಸೇರಿದ್ದಾರೆ. ಇನ್ನೂ 20 ಸ್ಥಾನಗಳು ಖಾಲಿ ಉಳಿದಿವೆ. ಪೂರ್ಣ ಪ್ರಮಾಣದಲ್ಲಿ ಸಂಪುಟ ವಿಸ್ತರಣೆಯಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, 2 ಸ್ಥಾನಗಳನ್ನು ಖಾಲಿ ಇಟ್ಟುಕೊಂಡು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಪುಟ ವಿಸ್ತರಿಸುವ ಸಾಧ್ಯತೆಗಳು ಹೆಚ್ಚಿವೆ.
ಸಂಪುಟ ವಿಸ್ತರಣೆ ನಂತರ ಅಸಮಾಧಾನ ಕಾಣಿಸಿಕೊಂಡರೆ ಸಚಿವ ಪಟ್ಟ ಸಿಗದವರನ್ನು ಸಮಾಧಾನಪಡಿಸಲು 2 ಸ್ಥಾನಗಳನ್ನು ಖಾಲಿ ಇಡುವ ಉದ್ದೇಶ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರದ್ದಾಗಿದೆ ಎಂದು ಹೇಳಲಾಗಿದೆ.
ಈ ಬಾರಿಯ ಸಚಿವ ಸಂಪುಟದಲ್ಲಿ ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಕೂಗು ಕಾಂಗ್ರೆಸ್ ಪಕ್ಷದಲ್ಲಿ ಕೇಳಿ ಬಂದಿದೆ. ಇದರ ನಡುವೆಯೇ 4-5 ಬಾರಿ ಶಾಸಕರಾಗಿರುವವರಿಗೆ ಸಚಿವ ಪಟ್ಟ ನೀಡಲೇಬೇಕು ಎಂಬ ಪ್ರಬಲ ಒತ್ತಾಯ ಇದೆ. ಹಾಗಾಗಿ ಸಂಪುಟ ವಿಸ್ತರಣೆಯನ್ನು ಅತ್ಯಂತ ಜಾಗರೂಕತೆಯಿಂದ ಮಾಡುವ ಅಗತ್ಯವಿದ್ದು, ಹೊಸಬರು ಮತ್ತು ಹಳಬರನ್ನು ಪರಿಗಣಿಸಿ ಎಲ್ಲರನ್ನೂ ಸಮಾಧಾನಪಡಿಸುವ ರೀತಿಯಲ್ಲಿ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಕನಿಷ್ಠ 7-8 ಮಂದಿ ಹೊಸಬರಿಗೆ ಸಚಿವ ಪಟ್ಟ ಸಿಗುವುದು ನಿಶ್ಚಿತ. ಪ್ರಾದೇಶಿಕವಾರು, ಜಾತಿವಾರು ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಸಚಿವರ ಪಟ್ಟಿಯನ್ನು ಕಾಂಗ್ರೆಸ್ ವರಿಷ್ಠರು ಅಂತಿಮಗೊಳಿಸುವರು.
ಕಾಂಗ್ರೆಸ್ ವರಿಷ್ಠ ರಾಹುಲ್‌ಗಾಂಧಿ ನಾಳೆ ವಿದೇಶ ಪ್ರವಾಸದಿಂದ ವಾಪಸ್ಸಾಗುತ್ತಿರುವ ಹಿನ್ನೆಲೆಯಲ್ಲಿ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಶಾಸಕರುಗಳ ಈಗಾಗಲೇ ದೆಹಲಿಗೆ ತೆರಳಿದ್ದು, ದೆಹಲಿಯಲ್ಲೇ ಮೊಕ್ಕಾಂ ಹೂಡಿದ್ದಾರೆ.
ಶಾಸಕರುಗಳಾದ ನರೇಂದ್ರಸ್ವಾಮಿ, ಸಂತೋಷ್ ಲಾಡ್, ಶಿವಲಿಂಗೇಗೌಡ, ಟಿ.ಬಿ. ಜಯಚಂದ್ರ, ಅಶೋಕ ಪಟ್ಟಣ್ ಸೇರಿದಂತೆ 7-8 ಶಾಸಕರು ನಿನ್ನೆಯೇ ದೆಹಲಿಗೆ ತೆರಳಿದ್ದಾರೆ.ನಾಳೆಯೊಳಗೆ ಮತ್ತಷ್ಟು ಸಚಿವಾಕಾಂಕ್ಷಿ ಶಾಸಕರುಗಳು ದೆಹಲಿಗೆ ತೆರಳುವ ಸಾಧ್ಯತೆಗಳಿವೆ.
ರಾಹುಲ್‌ಗಾಂಧಿ ವಿದೇಶ ಪ್ರವಾಸದಿಂದ ಬಂದ ನಂತರ ನಾಳೆ ಇಲ್ಲವೇ ಸೋಮವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ಧರಾಮ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಇವರೆಲ್ಲಾ ದೆಹಲಿಗೆ ತೆರಳಿ ವರಿಷ್ಠರ ಜತೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಿ, ಸಂಪುಟ ವಿಸ್ತರಣೆ ಆದಷ್ಟು ಬೇಗ ರಚಿಸಲು ಮುಂದಾಗಿದ್ದಾರೆ.

Share with Friends
author avatar
Digital Desk