
ಬಾದಾಮಿಯಲ್ಲಿ ಕರವೇ ಪ್ರತಿಭಟನೆ..!
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣದಲ್ಲಿ ಚಾಲುಕ್ಯ ಪರಮೇಶ್ವರ ಇಮ್ಮಡಿ ಪುಲಕೇಶಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಬಾಗಲಕೋಟೆ ರೈಲು ನಿಲ್ದಾಣಕ್ಕೆ ಚಾಲುಕ್ಯ ಪರಮೇಶ್ವರ ಇಮ್ಮಡಿ ಪುಲಕೇಶಿ ಮಹಾರಾಜರ ಹೆಸರಿಡುವಂತೆ ಆಗ್ರಹಿಸಿ ಹೆಚ್. ಶಿವರಾಮೇಗೌಡರ ಬಣದ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರ ಪ್ರಕಾರ, ಕಳೆದ ಜನವರಿಯಲ್ಲಿ ನಡೆದ ಚಾಲುಕ್ಯ ಉತ್ಸವದ ವೇಳೆ ಮುಖ್ಯಮಂತ್ರಿಗಳು ಪುಲಕೇಶಿ ವೃತ್ತ ನಿರ್ಮಾಣ ಹಾಗೂ ಮೂರ್ತಿ ಪ್ರತಿಷ್ಠಾಪನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ ಇದುವರೆಗೆ ಕಾಮಗಾರಿ ಆರಂಭವಾಗದಿರುವುದರಿಂದ ಸಾರ್ವಜನಿಕರಲ್ಲಿ ಅಸಮಾಧಾನ ವ್ಯಕ್ತವಾಗಿದೆ ಎಂದು ಆರೋಪಿಸಿದರು.
ಬರುವ 2026ರ ನವೆಂಬರ್ 1ರ ಕರ್ನಾಟಕ ರಾಜ್ಯೋತ್ಸವದೊಳಗೆ ಚಾಲುಕ್ಯ ಪರಮೇಶ್ವರ ಇಮ್ಮಡಿ ಪುಲಕೇಶಿ ಮಹಾರಾಜರ ವೃತ್ತ ನಿರ್ಮಾಣ ಪೂರ್ಣಗೊಳಿಸಿ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಉದ್ಘಾಟನೆ ಮಾಡಬೇಕು. ಜೊತೆಗೆ ಬಾಗಲಕೋಟೆ ರೈಲು ನಿಲ್ದಾಣಕ್ಕೆ ಚಾಲುಕ್ಯ ಪರಮೇಶ್ವರ ಇಮ್ಮಡಿ ಪುಲಕೇಶಿ ಮಹಾರಾಜರ ಹೆಸರನ್ನು ನಾಮಕರಣ ಮಾಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷರಾದ ಬಸವರಾಜ ಧರ್ಮಂತಿ, ಸರ್ಕಾರ ನಿಗದಿತ ಅವಧಿಯೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ ಬಾದಾಮಿ ತಾಲೂಕು ಹಾಗೂ ಬಾಗಲಕೋಟೆ ಜಿಲ್ಲೆಯಾದ್ಯಂತ ಬೃಹತ್ ಜನಾಂದೋಲನ ಮತ್ತು ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಮತ್ತು ಕರವೇ ವತಿಯಿಂದಲೇ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಸಂಚಾಲಕ ಗಣೇಶ್ ನಾಯಕ್, ಸ್ಪಂದನ ಮಾಚಾ, ತಾಲೂಕು ಪ್ರಧಾನ ಕಾರ್ಯದರ್ಶಿ ರುದ್ರಯ್ಯ ಕೊಂಗವಾಡ, ನಗರ ಘಟಕ ಅಧ್ಯಕ್ಷ ಮಲ್ಲು ನರೇಗಲ್, ಗ್ರಾಮ ಘಟಕ ಅಧ್ಯಕ್ಷ ಸುನಿಲ್ ಹೆಚ್. ದೇವರಮನಿ, ನಗರ ಘಟಕ ಪ್ರಧಾನ ಕಾರ್ಯದರ್ಶಿ ಸಚಿನ್ ಮಡಿವಾಳರ, ಮುಖಂಡರಾದ ಚಂದ್ರು ಮುತಗಾರ, ಪ್ರವೀಣ್ ತೆಗ್ಗಿ, ಗ್ರಾಮ ಘಟಕ ಉಪಾಧ್ಯಕ್ಷ ರವಿ ನಸೀಬಿ, ನಿಂಬಯ್ಯಾ ಕುಲಕರ್ಣಿ ಜಿಲ್ಲಾ ಸಾಮಾಜಿಕ ಜಾಲತಾಣ ಸಂಚಾಲಕರು.ಸೇರಿದಂತೆ ಜಿಲ್ಲಾ, ತಾಲೂಕು ಹಾಗೂ ನಗರ ಘಟಕಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.
