
ಸ್ಕ್ರಿಪ್ಟ್ ಬರೆದು ಆಸ್ಕರ್ ಲೆವಲ್ ಪರ್ಫಾರ್ಮೆನ್ಸ್ , ಸಿಎಂಗೆ ಟಾಂಗ್ ಕೊಟ್ಟ ನಿಖಿಲ್
ಬಾಗಲಕೋಟೆ, ಜು.15: ಬಿಡದಿ ಟೌನ್ಶಿಪ್ ವಿಚಾರದಲ್ಲಿ ರಾಜಕೀಯ ಜಟಾಪಟಿ ಜೋರಾಗಿದ್ದು, ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕೆಂದೂರು ಗ್ರಾಮದಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಸಿಎಂ ಈಗ ಹೊಸ ಸ್ಕ್ರಿಪ್ಟ್ ಬರೆದುಕೊಂಡು ಬಂದು ಆಸ್ಕರ್ ಮಟ್ಟದ ಪರ್ಫಾರ್ಮೆನ್ಸ್ ಡೆಲಿವರಿ ಮಾಡಿ ಹೋಗಿದ್ದಾರೆ ಎಂದು ಟೀಕಿಸಿದರು.
ಒಂದ್ಕಡೆ ಜಿಬಿಎ ಅಧಿಸೂಚನೆ ರಿವ್ಯೂ ಕಮಿಟಿ ಮಾಡ್ತೀನಿ ಎನ್ನುತ್ತಾರೆ. ಇನ್ನೊಂದ್ಕಡೆ ಇವತ್ತೇ ಮೂರು ಊರುಗಳ ಅಂತಿಮ ಅಧಿಸೂಚನೆ ಹೊರಡಿಸುತ್ತಾರೆ. ಇದರಿಂದಲೇ ಗೊತ್ತಾಗುತ್ತದೆ ಸಿಎಂ ಮನಸ್ಥಿತಿ ದ್ವಂದ್ವದ್ದು ಎಂದು. ಅದಕ್ಕೆ ನಾಟಕ ಮಂಡಳಿಯ ಅಧ್ಯಕ್ಷರು ಸಿಎಂ ಅವರೇ ಆಗಬೇಕು ಎಂದು ಕಿಡಿಕಾರಿದರು.
ಕುಮಾರಣ್ಣ ಪ್ರಿಲಿಮಿನರಿ ನೋಟಿಫಿಕೇಶನ್ ಮಾಡಿರಲಿಲ್ಲ, ರೆಡ್ ಜೋನ್ ಮಾಡಿರಲಿಲ್ಲ. ಜಸ್ಟ್ ಮಾಸ್ಟರ್ ಪ್ಲ್ಯಾನ್ ಮಾಡಿದ್ದರು. ಅದನ್ನೇ ಕುಮಾರಸ್ವಾಮಿ ಕನಸಿನ ಕೂಸು ಎಂದು ಹೇಳಿ, ಈಗ ನೀವು ಅದನ್ನ ತಲೆಮೇಲೆ ಕೂರಿಸಿಕೊಂಡು ಓಡಾಡುತ್ತಿದ್ದೀರಾ?” ಎಂದು ಅವರು ಪ್ರಶ್ನಿಸಿದರು.
ಇನ್ನು ನ್ಯಾಯಯುತವಾಗಿ ಬದುಕಿದ್ದೇನೆ ಎಂದಾದರೆ ಜೈಲಿಗೆ ಹೋಗುವ ಆತಂಕ ನಿಮಗೇಕೆ? ಜೈಲಿಗೆ ಯಾರನ್ನೂ ಕಳಿಸಲು ಆಗುವುದಿಲ್ಲ. ಕಾನೂನು ಯಾರಿಗೂ ಸೇರಿದ್ದಲ್ಲ.ಈ ರೀತಿ ಹೇಳಿಕೆ ನೀಡಿ ಸಮುದಾಯಗಳ ಮಧ್ಯೆ ಬಿರುಕು ತರಬೇಡಿ.
ಎಂದು ಹೇಳಿದರು.
ಸಿಎಂಗೆ ಇನ್ನು 18 ತಿಂಗಳು ಅಧಿಕಾರ ನಡೆಸಲು ಹೈಕಮಾಂಡ್ ಅವಕಾಶ ನೀಡಿದೆ.ಇನ್ನೂ 18 ತಿಂಗಳು ಸಿಎಂ ಆಗಿ ಮುಂದುವರೆಯಲಿ, ನಾಲ್ಕು ಒಳ್ಳೆಯ ಕೆಲಸ ಮಾಡಲಿ. ನಾವು ಆಶೀರ್ವದಿಸುತ್ತೇವೆ. ಆದರೆ ರೈತರ ವಿಚಾರದಲ್ಲಿ ತಪ್ಪು ಮಾಡಿದ ಸಂದರ್ಭದಲ್ಲಿ ನಾವು ಸುಮ್ಮನೆ ಕೂರುವುದಿಲ್ಲ ಎಂದು ಹೇಳಿದರು.
ಹಿಂದೆ ಈ ಯೋಜನೆ ಕೈಬಿಡಬೇಕು ಎಂದಾಗ ಕುಮಾರಣ್ಣ ಮೂರು ಬಾರಿ ರೈತರ ಸಭೆ ನಡೆಸಿದರು. ಆದರೆ 2 ತಿಂಗಳ ಹಿಂದೆ ಸಿಎಂ ಕಾಟಾಚಾರಕ್ಕೆ ಸಭೆ ಮಾಡಿದರು. ತಮಗೆ ಬೇಕಾದ ರೈತರನ್ನು ಮಾತ್ರ ಕರೆಸಿದರು. ವಿರೋಧ ವ್ಯಕ್ತಪಡಿಸುವ ರೈತರನ್ನು ಕರೆಸಲಿಲ್ಲ. ಹಸಿರು ಟವಲ್ ಹಾಕಿಕೊಂಡು ಕೂರಿಸಿಕೊಂಡರೆ ರೈತರಾಗಿಬಿಡುತ್ತಾರಾ? ಎಂದು ಪ್ರಶ್ನಿಸಿದರು.
ಡಿಕೆಶಿ ಅವರು ಜೈಲಿಗೆ ಹೋದಾಗ ಕುಮಾರಣ್ಣ ಅವರ ತಾಯಿಯನ್ನು ಜೈಲಿಗೆ ಕರೆದುಕೊಂಡು ಹೋಗಿ ಭೇಟಿ ಮಾಡಿಸಿದ್ದರು. ಒಕ್ಕಲಿಗರು ಸಿಎಂ ಆದರು’ ಎಂದು ಹೊಟ್ಟೆಕಿಚ್ಚು ಎಂದು ಹೇಳುತ್ತಿದ್ದಾರೆ. ಒಕ್ಕಲಿಗರು ಸಿಎಂ ಆದ ಕೂಡಲೇ ಮೊದಲ ದಿನವೇ ನಾವು ಅಭಿನಂದನೆ ಸಲ್ಲಿಸಿದ್ದೇವೆ. ಒಕ್ಕಲುತನ ಮಾಡಿರುವ ಬಡ ರೈತರ ರಕ್ಷಣೆಗೆ ನಿಲ್ಲುವುದು ನಮ್ಮ ಧರ್ಮ ಎಂದು ತಿಳಿಸಿದರು.
ಇದೇ ವೇಳೆ ನಾನು ಕೇಳುವ ಎರಡು ಪ್ರಶ್ನೆಗೆ ಸಿಎಂ ಉತ್ತರ ಕೊಡಲಿ. 1. ಕಮಿಟಿ ಮಾಡ್ತೀನಿ ಎಂದಿದ್ದು ಯಾರು? 2. ಮೂರು ಹಳ್ಳಿಗಳ ಅಂತಿಮ ಅಧಿಸೂಚನೆ ಹೊರಡಿಸಿದ್ದು ಯಾರು? ಎಂದು ಸವಾಲು ಹಾಕಿದರು.
