BlogEntertainmentLatest

ನಟ ದರ್ಶನ್‌ಗೆ ಆಸ್ಪತ್ರೆಯಲ್ಲಿ ಎಂಆರ್‌ಐ, CT ಸ್ಕ್ಯಾನಿಂಗ್‌

ಬೆಂಗಳೂರು: ಬಳ್ಳಾರಿ ಕಾರಾಗೃಹದ ಹೈಸೆಕ್ಯೂರಿಟಿ ಸೆಲ್‌ನಲ್ಲಿರುವ ದರ್ಶನ್‌ ಅವರಿಗೆ ಕಳೆದ ಕೆಲವು ದಿನಗಳಿಂದ ತೀವ್ರ ಬೆನ್ನುನೋವು ಕಾಡುತ್ತಿತ್ತು. ಬಿಮ್ಸ್‌ ವೈದ್ಯರ ಸೂಚನೆ ಮೇರೆಗೆ ಸೆಲ್‌ನಲ್ಲಿಯೇ ಫಿಸಿಯೋಥೆರಪಿ ಚಿಕಿತ್ಸೆ ನೀಡಲಾಗುತ್ತಿತ್ತು. ಎಂಆರ್‌ಐ ಸ್ಕ್ಯಾ‌ನಿಂಗ್‌ಗೆ ಒಳಗಾಗುವಂತೆ ವೈದ್ಯರು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ನಟ ದರ್ಶನ್‌ ಅವರನ್ನು ಬಳ್ಳಾರಿ ಜೈಲಿನಿಂದ ರಾತ್ರೋ ರಾತ್ರಿ ಬಿಮ್ಸ್‌ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿನ ಎಂಆರ್‌ ಐ ಹಾಗು ಸಿಟಿ ಸ್ಕ್ಯಾ‌ನ್‌ ಮಾಡಲಾಗಿದ್ದು, ವೈದ್ಯರು ಅಗತ್ಯ ವರದಿಯನ್ನು ಬುಧವಾರ ಜೈಲು ಅಧಿಕಾರಿಗಳಿಗೆ ನೀಡಿದ್ದಾರೆ.

ಜಿಲ್ಲಾಸ್ಪತ್ರೆಯ ಜಿಲ್ಲಾಶಸ್ತ್ರಚಿಕಿತ್ಸಕಾ ಡಾ.ಎನ್‌.ಬಸರೆಡ್ಡಿ ನೇತೃತ್ವದ ತಂಡ ಆರೋಗ್ಯ ತಪಾಸಣೆ ಮಾಡಿತು. ಬಳಿಕ ಬಿಮ್ಸ್‌ಗೆ ಸ್ಕ್ಯಾ‌ನಿಂಗ್‌ಗೆ ಕರೆದೊಯ್ಯಲಾಯಿತು. ಬಿಮ್ಸ್‌ ಆಸ್ಪತ್ರೆಯಲ್ಲಿಎಂಆರ್‌ಐ ಸ್ಕ್ಯಾ‌ನಿಂಗ್‌ಗೆ ಹಾಜರಾದ ದರ್ಶನ್‌ ಅವರಿಗೆ ರೆಡಿಯೋಲಜಿಸ್ಟ್‌ ಡಾ.ಸದಾಶಿವಗೌಡ ಹಾಗೂ ನ್ಯೂರೊ ಸರ್ಜನ್‌ ಡಾ.ವಿಶ್ವನಾಥ್‌ ನೇತೃತ್ವದ ತಂಡ ಸ್ಕ್ಯಾ‌ನಿಂಗ್‌ ಪ್ರಕ್ರಿಯೆ ನಡೆಸಿತು. ಒಂದು ತಾಸು ನಡೆದ ಸ್ಕ್ಯಾ‌ನಿಂಗ್‌ ಪ್ರಕ್ರಿಯೆ ಬಳಿಕ ದರ್ಶನ್‌ ಅವರನ್ನು ಜೈಲಿನ ಅಧಿಕಾರಿಗಳು ವಾಪಸ್‌ ಕೇಂದ್ರ ಕಾರಾಗೃಹದ ಹೈಸೆಕ್ಯೂರಿಟಿ ಸೆಲ್‌ಗೆ ಕರೆತಂದರು.

ಈ ಹಿಂದೆ ಚಿಕಿತ್ಸೆ ನೀಡಿದ್ದ ವೈದ್ಯರು ಶಸ್ತ್ರಚಿಕಿತ್ಸೆ ಅಗತ್ಯ ಇದೆ ಎಂದು ಹೇಳಿದ್ದರು. ಸದ್ಯ ಎಂಆರ್‌ಐ ಸಿಟಿ ಸ್ಕ್ಯಾನ್‌ ವರದಿಯನ್ನು ಗೌಪ್ಯವಾಗಿ ಜೈಲಿನ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಜೈಲು ಅಧಿಕಾರಿಗಳು ವರದಿ ಸಿದ್ಧಪಡಿಸಿ ಅಕ್ಟೋಬರ್‌ 28 ರೊಳಗೆ ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಕೆ ಮಾಡಲಿದ್ದಾರೆ. ಆ ವರದಿ ಆಧರಿಸಿ ನಟನಿಗೆ ಜಾಮೀನು ನೀಡಬೇಕೋ? ಬಳ್ಳಾರಿಯಲ್ಲಿಯೇ ಶಸ್ತ್ರಚಿಕಿತ್ಸೆ ಮಾಡಿಸಬೇಕೋ ಅಥವಾ ಬೆಂಗಳೂರಿಗೆ ಕರೆತಂದು ಚಿಕಿತ್ಸೆ ಕೊಡಿಸಬೇಕೋ? ಎಂದು ಕೋರ್ಟ್‌ ನಿರ್ಧರಿಸಲಿದೆ. ಒಂದು ವೇಳೆ ಜಾಮೀನು ನೀಡಿದರೆ ದೀಪಾವಳಿ ಹಬ್ಬಕ್ಕೆನ ದರ್ಶನ್‌ ಬಿಡುಗಡೆಯಾಗಿ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಚಿಕಿತ್ಸೆ ಪಡೆಯಲು ಒಪ್ಪದ ದರ್ಶನ್ :
ಆರಂಭದಲ್ಲಿ ಬಳ್ಳಾರಿಯಲ್ಲಿ ಚಿಕಿತ್ಸೆ ಪಡೆಯಲು ಕೊಲೆ ಕೇಸ್‌ ಆರೋಪಿ ದರ್ಶನ್‌ ಒಪ್ಪಿಗೆ ಸೂಚಿಸಿರಲಿಲ್ಲ. ಮಂಗಳವಾರ ಜೈಲಿಗೆ ಭೇಟಿ ನೀಡಿದ್ದ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬದರೊಂದಿಗೆ ಜೈಲಿನ ಅಧಿಕಾರಿಗಳು ಮಾತನಾಡಿ ದರ್ಶನ್‌ ಅವರನ್ನು ಸ್ಕ್ಯಾ‌ನಿಂಗ್‌ಗೆ ಮನವೊಲಿಸಲಾಯಿತು.

ಅಭಿಮಾನಿಗಳ ದಂಡು :
ದರ್ಶನ್‌ ಅವರನ್ನು ಜೈಲಿನಿಂದ ಆಸ್ಪತ್ರೆಗೆ ಕರೆತರುತ್ತಿದ್ದಾರೆ ಎಂದು ತಿಳಿದ ಬಳಿಕ ಬಳ್ಳಾರಿ ಸುತ್ತಮುತ್ತ ಅವರ ಅಭಿಮಾನಿಗಳು ಆಸ್ಪತ್ರೆಯಲ್ಲಿ ಜಮಾಯಿಸಿದ್ದರು. ಜೈಕಾರ, ಘೋಷಣೆಗಳು ಕೂಗಿದರು. ವಿಡಿಯೋ, ಫೋಟೋ ಕ್ಲಿಕ್ಕಿಸಿಕೊಂಡರು. ಮುಂಜಾಗ್ರತಾ ಕ್ರಮವಾಗಿ ಬಿಮ್ಸ್‌ ಆಸ್ಪತ್ರೆಯ ಬಳಿ ಹೆಚ್ಚಿನ ಪೊಲೀಸ್‌ ಭದ್ರತೆಯನ್ನು ನಿಯೋಜಿಸಲಾಗಿತ್ತು.

Share with Friends
author avatar
News Desk