BlogTop Storiesರಾಷ್ಟ್ರೀಯ-National

ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗದ ಮೂಲಕ ಹೊಸ ಇತಿಹಾಸ ಬರೆಯಲು ಇಸ್ರೋ ಕ್ಷಣಗಣನೆ

ಶ್ರೀ ಹರಿಕೋಟಾ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ISRO) ಇಂದು (ಡಿ.30) ಮಹತ್ವದ ದಿನ. ಸೋಮವಾರ ರಾತ್ರಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ‘ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್’ (SpaDEx) ಯೋಜನೆ ಭಾಗವಾಗಿ 2 ಉಪಗ್ರಹಗಳು ಉಡಾವಣೆಯಾಗಲಿದೆ.

ಪಿಎಸ್‌‍ಎಲ್‌ವಿ ರಾಕೆಟ್‌ನಲ್ಲಿ ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗವನ್ನು ಎರಡು ನಿಮಿಷಗಳ ಕಾಲ ಮರು ನಿಗದಿಪಡಿಸಲಾಗಿದೆ ಎಂದು ಇಸ್ರೋ ತಿಳಿಸಿದೆ. ಭಾರತದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಪ್ರಮುಖ ಮೈಲಿಗಲ್ಲು, ಈ ಮಿಷನ್‌ ಮೂಲತಃ ಯೋಜಿತ 9.58 ರ ಬದಲಿಗೆ ಇಂದು ರಾತ್ರಿ 10 ಗಂಟೆಗೆ ಮಾಡಲಾಗುವುದು ಎಂದು ಇಸ್ರೋ ಹೇಳಿದೆ.

ಇಂದು ರಾತ್ರಿ ನಿಖರವಾಗಿ 10 ಗಂಟೆಗೆ, ಸ್ಪಾ ಡೆಕ್ಸ್ ಜೊತೆಗೆ ಪಿಎಸ್‌‍ಎಲ್‌ವಿ -ಸಿ 60 ಮತ್ತು ನವೀನ ಪೇಲೋಡ್‌ಗಳನ್ನು ಲಿಫ್ಟ್ಆಫ್‌ಗೆ ಹೊಂದಿಸಲಾಗಿದೆ ಎಂದು ಇಸ್ರೋ ನವೀಕರಣ ಹೇಳಿಕೆಯಲ್ಲಿ ತಿಳಿಸಿದೆ. ಭೂಮಿಯಿಂದ 476 ಕಿ.ಮೀ ದೂರದ ಕಕ್ಷೆಗೆ ಉಪಗ್ರಹಗಳನ್ನು ರಾಕೆಟ್‌ ಯಶಸ್ವಿಯಾಗಿ ಸೇರಿಸಿದ ಬಳಿಕ ಜನವರಿ ಮೊದಲ ವಾರದಲ್ಲಿ ಇಸ್ರೋ ಡಾಕಿಂಗ್‌ ಪ್ರಯೋಗ ನಡೆಯಲಿದೆ.

‘ ಇಸ್ರೋ’ ಇದೀಗ ಅಮೆರಿಕ, ರಷ್ಯಾ & ಚೀನಾ ಮಾಡಿರುವ ಸಾಧನೆ ಸಾಲಿಗೆ ಸೇರಲು ಸಕಲ ಸಿದ್ಧತೆ ನಡೆಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮಹತ್ವದ ಉಡಾವಣೆಗೆ ಸಜ್ಜಾಗಿದೆ. ಹೀಗೆ ‘ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್’ ಎಂಬ ಮಹತ್ವದ ಸಾಧನೆಗೆ ಇಸ್ರೋ ಸಜ್ಜಾಗಿದೆ. ಈ ಸಾಧನೆಯ ಪಟ್ಟಿಯಲ್ಲಿ ಅಮೆರಿಕ, ರಷ್ಯಾ & ಚೀನಾ ಮಾತ್ರ ಇದ್ದು, ಇದೀಗ ಭಾರತದ ಹೆಮ್ಮೆ ಇಸ್ರೋ ಕೂಡ ‘ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್’ ಮಾಡಲು ಸಜ್ಜಾಗಿದೆ.

ಏನಿದು ಪ್ರಯೋಗ ಏಕಿಷ್ಟು ಮಹತ್ವ..?
ಈ ಎರಡೂ ಉಪಗ್ರಹಗಳು ತನ್ನಲ್ಲಿರುವ ಸೆನ್ಸರ್‌, ವ್ಯವಸ್ಥೆಯನ್ನು ಬಳಸಿ ಒಂದಕ್ಕೊಂದು ಜೋಡಣೆ ಆಗುವಂತೆ ಮಾಡುವುದು. ನಂತರ ಪರಸ್ಪರ ಬೇರೆಯಾಗುವಂತೆ ಮಾಡಲು ಇಸ್ರೋ ಈ ಪ್ರಯೋಗ ನಡೆಸಲಿದೆ. ಈ ಕಾರಣಕ್ಕೆ ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್’ (ಸ್ಪೇಡೆಕ್ಸ್) ಎಂಬ ಹೆಸರನ್ನು ಇಡಲಾಗಿದೆ.

ಮಾನವಸಹಿತ ಅಂತರಿಕ್ಷಯಾನ, ಚಂದ್ರನ ಅಂಗಳಕ್ಕೆ ಮನುಷ್ಯರನ್ನು ಕಳುಹಿಸಿ, ವಾಪಸ್‌ ಕರೆತರಲು ಇಸ್ರೋ ಈಗಾಗಲೇ ಯೋಜನೆ ರೂಪಿಸಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಂತೆ ಇಸ್ರೋ ತನ್ನದೇ ಆದ ಸ್ವದೇಶಿ ‘ಭಾರತೀಯ ಅಂತರಿಕ್ಷ ನಿಲ್ದಾಣ’ ಸ್ಥಾಪಿಸಲು ಸಿದ್ಧತೆ ಆರಂಭಿಸಿದೆ. ಆ ನಿಲ್ದಾಣಕ್ಕೆ ಗಗನಯಾತ್ರಿಗಳು, ಉಪಕರಣಗಳನ್ನು ಕಳುಹಿಸಲು ಡಾಕಿಂಗ್‌, ಅನ್‌ಡಾಕಿಂಗ್‌ ತಂತ್ರಜ್ಞಾನ ತಿಳಿದಿರಬೇಕು.

Share with Friends
author avatar
News Desk