BlogLatestTop Storiesವಿದೇಶ-International

ಇಸ್ರೇಲ್ ಮೇಲೆ ಹಿಜ್ಬುಲ್ಲಾ ರಾಕೆಟ್ ದಾಳಿ, ಆಟವಾಡುತ್ತಿದ್ದ ಮಕ್ಕಳು ಸೇರಿ 12 ಮಂದಿ ಸಾವು

ಜೆರುಸಲೇಂ : ಇಸ್ರೇಲ್​ ಮೇಲೆ ಹಿಜ್ಬುಲ್ಲಾ ನಡೆಸಿದ ರಾಕೆಟ್ ದಾಳಿಯಲ್ಲಿ ಮಕ್ಕಳು ಸೇರಿ 12 ಮಂದಿ ಮೃತಪಟ್ಟಿದ್ದಾರೆ. ಇಸ್ರೇಲ್ ಆಕ್ರಮಿತ ಮಜ್ದಾಲ್ ಶಾಮ್ಸ್ ಪ್ರದೇಶದಲ್ಲಿ ಪುಟ್ಬಾಲ್ ಆಡುತ್ತಿದ್ದ ಮಕ್ಕಳ ಮೇಲೆ ಇರಾನ್ ಬೆಂಬಲಿತ ಭಯೋತ್ಪಾದಕ ಸಂಘಟನೆ ಹಿಜ್ಬುಲ್ಲಾ ನಡೆಸಿದ ರಾಕೆಟ್ ದಾಳಿ ನಡೆಸಿದೆ. 19 ಮಂದಿ ಗಾಯಗೊಂಡಿದ್ದು, 6 ಮಂದಿ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಮೇಘನ್ ಡೇವಿಡ್ ಅಡೋಮ್(ಎಂಡಿಎ) ತಂಡವು ಆಸ್ಪತ್ರೆ ದಾಖಲಿಸಿದೆ ಎಂದು ಪ್ರಕಟಣೆ ತಿಳಿಸಿದೆ.

ಹಿಜ್ಬುಲ್ಲಾ ನೆಲೆಯಿಂದಲೇ ರಾಕೆಟ್ ಲಾಂಚ್ ಆಗಿದೆ ಎಂದು ಪ್ರಾಥಮಿಕ ತನಿಖೆ ಬಳಿಕ ತಿಳಿದು ಬಂದಿದೆ. ದಕ್ಷಿಣ ಲೆಬನಾನ್‌ನ ಚೆಬಾದ ಹಳ್ಳಿಯೊಂದರಿಂದ ರಾಕೆಟ್ ಉಡಾಯಿಸಲಾಗಿದೆ ಸ್ಥಳೀಯ ಪತ್ರಿಕೆ ವರದಿ ಮಾಡಿದೆ. ಲೆಬನಾನ್‌ನಿಂದ ಇಸ್ರೇಲ್ ಭೂಪ್ರದೇಶಕ್ಕೆ ಬಿದ್ದ 30 ಸ್ಪೋಟಕಗಳನ್ನು ಗುರುತಿಸಿರುವುದಾಗಿ ಇಸ್ರೇಲ್ ಹೇಳಿದೆ.ಇಸ್ರೇಲ್ ಪ್ರಕಾರ, ಅಕ್ಟೋಬರ್ 7 ರಂದು ಹೋರಾಟ ಪ್ರಾರಂಭವಾದ ನಂತರ ಹಿಜ್ಬುಲ್ಲಾ ನಡೆಸಿದ ಅತಿದೊಡ್ಡ ದಾಳಿ ಇದಾಗಿದೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕದಿಂದ ವಾಪಸಾದ ಸಂದರ್ಭದಲ್ಲಿ ಈ ದಾಳಿ ನಡೆದಿದೆ. 1967 ರಲ್ಲಿ ಆರು ದಿನಗಳ ಯುದ್ಧದ ಸಮಯದಲ್ಲಿ ಇಸ್ರೇಲ್ ಸಿರಿಯಾದಿಂದ ವಶಪಡಿಸಿಕೊಂಡ ಪ್ರದೇಶ ಇದು. ಇದು ಅಂತರಾಷ್ಟ್ರೀಯ ಕಾನೂನುಗಳು ಮತ್ತು UN ಭದ್ರತಾ ಮಂಡಳಿಯ ನಿರ್ಣಯಗಳ ಅಡಿಯಲ್ಲಿ ಆಕ್ರಮಿತ ಪ್ರದೇಶವೆಂದು ಪರಿಗಣಿಸಲಾಗಿದೆ.ಈ ಪ್ರದೇಶವು ಸರಿಸುಮಾರು 50,000 ಇಸ್ರೇಲಿ ಯಹೂದಿಗಳು ಮತ್ತು ಡ್ರೂಜ್‌ಗಳಿಗೆ ನೆಲೆಯಾಗಿದೆ.

ಕೆಲವು ಇಸ್ರೇಲಿ ನಾಯಕರು ಪ್ರತೀಕಾರಕ್ಕೆ ಕರೆ ನೀಡಿದ್ದಾರೆ. ಆದರೆ, ರಾಕೆಟ್ ಹಾರಿಸಿರುವುದನ್ನು ಹಿಜ್ಬುಲ್ಲಾ ನಿರಾಕರಿಸಿದೆ. ಕಳೆದ 10 ತಿಂಗಳಿಂದ ಇಸ್ರೇಲ್ ಸೇನೆ ಮತ್ತು ಹಿಜ್ಬುಲ್ಲಾ ಪರಸ್ಪರ ಗುಂಡಿನ ದಾಳಿ ನಡೆಸುತ್ತಿದೆ.

Share with Friends
author avatar
News Desk