ಇರಾನ್‌ನಲ್ಲಿ ಬಸ್ ಪಲ್ಟಿಯಾಗಿ 35 ಪಾಕ್ ಪ್ರಯಾಣಿಕರು ಸಾವು
ಯಾಜ್ದ್ : ಇರಾನ್‌ನಲ್ಲಿ ಬಸ್ ಉರುಳಿ ಬಿದ್ದು 35 ಪ್ರಯಾಣಿಕರು ಸಾವನ್ನಪ್ಪಿದ ಘಟನೆ ನಡೆದಿದೆ. ಪಾಕಿಸ್ತಾನದಿಂದ ಇರಾಕ್‌ಗೆ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಇರಾನ್‌ನ ಯಾಜ್ದ್ ಪ್ರಾಂತ್ಯದಲ್ಲಿ ಉರುಳಿಬಿದ್ದಿದ್ದು, ಕನಿಷ್ಠ 35 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಬಸ್ಸಿನಲ್ಲಿ 53 ಪ್ರಯಾಣಿಕರು ಇದ್ದರು, ಅವರಲ್ಲಿ ಹೆಚ್ಚಿನವರು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಲರ್ಕಾನಾ ನಗರದವರು ಎನ್ನಲಾಗಿದ್ದು , ಮಂಗಳವಾರ ರಾತ್ರಿ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಕನಿಷ್ಠ 18 ಮಂದಿ ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಪಾಕಿಸ್ತಾನದ ಉಪಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್ ಅವರು ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಶಿಯಾ ಯಾತ್ರಿಕರು ಇರಾನ್‌ನ ಪವಿತ್ರ ನಗರವಾದ ಕೋಮ್‌ಗೆ ತೆರಳಿದ್ದರು. ಪಾಕಿಸ್ತಾನದಿಂದ ಬಂದ ಯಾತ್ರಿಕರು ಶಿಯಾ ಸಮುದಾಯಕ್ಕೆ ಸೇರಿದವರು. ಈ ದಿನದಂದು ಹೆಚ್ಚಿನ ಸಂಖ್ಯೆಯ ಶಿಯಾಗಳು ಕರ್ಬಲಾಕ್ಕೆ ಭೇಟಿ ನೀಡುತ್ತಾರೆ.
ಬಸ್‌ನ ಬ್ರೇಕ್ ಸರಿಯಾಗಿ ಹಾಕದಿರುವುದು ಅಪಘಾತಕ್ಕೆ ಕಾರಣವಾಗಿದ್ದು, ಚಾಲಕನ ನಿಯಂತ್ರಣ ತಪ್ಪಿ ಬಸ್ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅಪಘಾತದ ನಂತರ ಸ್ಥಳೀಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಗಾಯಗೊಂಡ ಪ್ರಯಾಣಿಕರನ್ನು ಆಸ್ಪತ್ರೆಗೆ ಕರೆದೊಯ್ದರು.
