Blogರಾಷ್ಟ್ರೀಯ-National

ತಮಿಳುನಾಡಿನ ತಿರುವಣ್ಣಾಮಲೈ ತೋಟದ ಮನೆಯಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ತಿರುವಣ್ಣಾಮಲೈ : ತಿರುವಣ್ಣಾಮಲೈ ಗಿರಿವಾಲಂ ಪಾಥ್​ನಲ್ಲಿರುವ ತೋಟದ ಮನೆಯಲ್ಲಿ ಬಾಡಿಗೆಗೆ ತಂಗಿದ್ದ ಚೆನ್ನೈ ಮೂಲದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ನಡೆದಿದೆ.’ಆಧ್ಯಾತ್ಮಿಕ ವಿಮೋಚನೆ’ ಪಡೆಯುವ ಪ್ರಯತ್ನದಲ್ಲಿ ಅವರು ವಿಷ ಸೇವಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಗಳು ಬಹಿರಂಗಪಡಿಸಿವೆ.

ಮೃತರನ್ನು ಚೆನ್ನೈನ ವ್ಯಾಸರ್ಪಾಡಿ ನಿವಾಸಿಗಳಾದ ಶ್ರೀ ಮಹಾಕಾಲ ವ್ಯಾಸರ್ (40), ಕೆ. ರುಕ್ಮಿಣಿ ಪ್ರಿಯಾ (45), ಕೆ. ಜಲಂಧರಿ (17) ಮತ್ತು ಮುಕುಂದ್ ಆಕಾಶ್ ಕುಮಾರ್ (12) ಎಂದು ಗುರುತಿಸಲಾಗಿದೆ.

ತಿರುವಣ್ಣಾಮಲೈ ಗಿರಿವಾಲಂ ಪಾಥ್​ನಲ್ಲಿ ಅನೇಕ ವಸತಿ ನಿಲಯಗಳು, ಅಪಾರ್ಟ್​ಮೆಂಟ್​ಗಳು ಹಾಗೂ ಫಾರ್ಮ್​ಹೌಸ್​ಗಳಿವೆ. ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಅಣ್ಣಾಮಲೈ ದೇವರ ದರ್ಶನಕ್ಕೆ ಬರುವ ಭಕ್ತರು ಇಲ್ಲಿ ತೋಟದ ಮನೆಗಳನ್ನು ಬಾಡಿಗೆ ಪಡೆಯುವುದು ಸಾಮಾನ್ಯ. ಹೀಗೆ ಡಿ.26ರಂದು ಚೆನ್ನೈನ ವ್ಯಾಸರಪಾಡಿಯ ಈ ನಾಲ್ವರು ಆನ್​ಲೈನ್​ ಮೂಲಕ ಗಿರಿವಾಲಂ ಪಾಥ್‌ನಲ್ಲಿರುವ ಫಾರ್ಮ್ ಹೌಸ್ ಬುಕ್ ಮಾಡಿದ್ದು, ಶುಕ್ರವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ತೋಟದ ಮನೆಗೆ ಚೆಕ್​​ಇನ್​ ಆಗಿದ್ದರು.

ಶನಿವಾರ ಬೆಳಗ್ಗೆ ಫಾರ್ಮ್​ಹೌಸ್ ಸಿಬ್ಬಂದಿ ಅವರು ತಂಗಿದ್ದ ಕೊಠಡಿಯ ಬಾಗಿಲು ತಟ್ಟಿದ್ದು, ಎಷ್ಟೋ ಸಮಯವಾದರೂ ಬಾಗಿಲು ತೆರೆದಿರಲಿಲ್ಲ. ಎಷ್ಟೋ ಹೊತ್ತು ಬಡಿದರೂ ಬಾಗಿಲು ತೆರೆಯದ ಕಾರಣ ಬುಕ್ಕಿಂಗ್ ವೇಳೆ ನೀಡಿದ್ದ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿದ್ದರು. ಫೋನ್​ ರಿಂಗಾಗುತ್ತಲೇ ಇತ್ತು. ಆದರೆ ಯಾರೂ ಕರೆ ಸ್ವೀಕರಿಸಲಿಲ್ಲ. ಬಳಿಕ ಕೊಠಡಿಯ ಕಿಟಕಿಯಿಂದ ನೋಡಿದಾಗ ನಾಲ್ವರು ಪ್ರಜ್ಞೆಹೀನ ಸ್ಥಿತಿಯಲ್ಲಿ ಮಲಗಿರುವ ಹಾಗೆ ಬಂದಿತ್ತು. ಇದರಿಂದ ಗಾಬರಿಗೊಂಡ ಫಾರ್ಮ್ ಹೌಸ್ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ನೀಡುತ್ತಿದ್ದಂತೆ ತಿರುವಣ್ಣಾಮಲೈ ಜಿಲ್ಲಾ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಸತೀಶ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಅವರು ತಂಗಿದ್ದ ಕೊಠಡಿಯ ಬೀಗ ಒಡೆದು ಒಳಗೆ ಹೋಗಿದ್ದಾರೆ. ಇವರೆಲ್ಲರೂ ಪ್ರತಿ ವರ್ಷ ತಿರುವಣ್ಣಾಮಲೈನಲ್ಲಿ ನಡೆಯುವ ಕಾರ್ತಿಗೈ ದೀಪಂ ಉತ್ಸವದಲ್ಲಿ ನಿಯಮಿತವಾಗಿ ಭಾಗಿಯಾಗುತ್ತಿದ್ದರು. ಈ ವರ್ಷ ಉತ್ಸವದಲ್ಲಿ ಪಾಲ್ಗೊಂಡ ನಂತರ ಅವರು ಚೆನ್ನೈಗೆ ಮರಳಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಮೋಕ್ಷ ಪಡೆಯಲು ಭಗವಾನ್ ಅಣ್ಣಾಮಲೈಯರ್ ಮತ್ತು ದೇವಿ ಮಹಾಲಕ್ಷ್ಮಿ ಅವರು ತಮ್ಮನ್ನು ಕರೆದಿದ್ದಾರೆ ಎಂದು ಶುಕ್ರವಾರ ಮತ್ತೆ ತಿರುವಣ್ಣಾಮಲೈಗೆ ಹಿಂತಿರುಗಿದ್ದಾರೆ ಎಂದು ವರದಿಯಾಗಿದೆ.

ನಾಲ್ವರೂ ಶಿವಗಂಗೈ ಜಿಲ್ಲೆಯವರಾಗಿದ್ದು, ಚೆನ್ನೈನಲ್ಲಿ ನೆಲೆಸಿದ್ದಾರೆ. ಚೆನ್ನೈನಿಂದ ತಿರುವಣ್ಣಾಮಲೈಗೆ ಬಂದಿದ್ದರು. ನಾಲ್ವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ತಿರುವಣ್ಣಾಮಲೈ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಿದ್ದೇವೆ” ಎಂದು ಜಿಲ್ಲಾ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಸತೀಶ್ ಕುಮಾರ್ ತಿಳಿಸಿದ್ದಾರೆ.

Share with Friends
author avatar
News Desk