BlogLatestTop Storiesರಾಷ್ಟ್ರೀಯ-National

ಅಂಡಮಾನ್-ನಿಕೋಬಾರ್ ರಾಜಧಾನಿ ಪೋರ್ಟ್ ಬ್ಲೇರ್​ಗೆ ಶ್ರೀ ವಿಜಯ ಪುರಂ ಎಂದು ಮರುನಾಮಕರಣ

ನವದೆಹಲಿ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ರಾಜಧಾನಿ ಪೋರ್ಟ್ ಬ್ಲೇರ್ ಅನ್ನು ಕೇಂದ್ರ ಸರ್ಕಾರವ ಶ್ರೀ ವಿಜಯ ಪುರಂ ಎಂದು ಮರುನಾಮಕರಣ ಮಾಡಿದೆ.

ದೇಶವನ್ನು ಗುಲಾಮಗಿರಿಯ ಎಲ್ಲಾ ಚಿಹ್ನೆಗಳಿಂದ ಮುಕ್ತಗೊಳಿಸುವ ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪದಿಂದ ಪ್ರೇರಿತರಾಗಿ ಶುಕ್ರವಾರ(ಸೆ.13) ಗೃಹ ಸಚಿವಾಲಯವು ಪೋರ್ಟ್ ಬ್ಲೇರ್ ಅನ್ನು ‘ಶ್ರೀ ವಿಜಯಪುರಂ’ ಎಂದು ಹೆಸರಿಸಲು ನಿರ್ಧರಿಸಿದೆ ಎಂದು ಶಾ ತಿಳಿಸಿದ್ದಾರೆ.

ಈ ಹಿಂದಿನ ಹೆಸರು ವಸಾಹತುಶಾಹಿ ಪರಂಪರೆಯನ್ನು ಹೊಂದಿದ್ದು, ಶ್ರೀ ವಿಜಯ ಪುರಂ ಎಂಬ ಹೊಸ ಹೆಸರು ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಸಾಧಿಸಿದ ವಿಜಯವನ್ನು ಸಂಕೇತಿಸುತ್ತದೆ ಎಂದು ಗೃಹ ಸಚಿವ ಅಮಿತ್ ಶಾ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದಕ್ಕೂ ಮೊದಲು, 23 ಜನವರಿ 2023 ರಂದು ನೇತಾಜಿಯವರ 126 ನೇ ಜನ್ಮದಿನದಂದು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ 21 ದ್ವೀಪಗಳಿಗೆ ಪರಮವೀರ ಚಕ್ರ ವಿಜೇತರ ಹೆಸರನ್ನು ಇಡಲು ಪ್ರಧಾನಿ ಮೋದಿ ನಿರ್ಧರಿಸಿದ್ದರು.

28 ಡಿಸೆಂಬರ್ 2018 ರಂದು, ಹ್ಯಾವ್‌ಲಾಕ್ ದ್ವೀಪ, ನೀಲ್ ದ್ವೀಪ ಮತ್ತು ಅಂಡಮಾನ್ ಮತ್ತು ನಿಕೋಬಾರ್‌ನ ರಾಸ್ ದ್ವೀಪಗಳ ಹೆಸರನ್ನು ಬದಲಾಯಿಸಲಾಯಿತು. ಹ್ಯಾವ್ಲಾಕ್ ದ್ವೀಪಕ್ಕೆ ಸ್ವರಾಜ್ ದ್ವೀಪ, ನೀಲ್ ದ್ವೀಪಕ್ಕೆ ಶಹೀದ್ ದ್ವೀಪ ಮತ್ತು ರಾಸ್ ದ್ವೀಪಕ್ಕೆ ನೇತಾಜಿ ಸುಭಾಷ್ ಚಂದ್ರ ದ್ವೀಪ ಎಂದು ಹೆಸರಿಸಲಾಗಿತ್ತು ಎಂದು ಅಮಿತ್​ ಶಾ ಬರೆದುಕೊಂಡಿದ್ದಾರೆ.

‘ಶ್ರೀ ವಿಜಯಪುರಂ’ ಹೆಸರು ಸ್ವಾತಂತ್ರ್ಯ ಹೋರಾಟ ಮತ್ತು ಅದರಲ್ಲಿ ಅಂಡಮಾನ್ ಮತ್ತು ನಿಕೋಬಾರ್ ಕೊಡುಗೆಯನ್ನು ಪ್ರತಿಬಿಂಬಿಸುತ್ತದೆ. ಈ ದ್ವೀಪವು ಸ್ವಾತಂತ್ರ್ಯ ಮತ್ತು ಇತಿಹಾಸದಲ್ಲಿ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಚೋಳ ಸಾಮ್ರಾಜ್ಯದಲ್ಲಿ ನೌಕಾನೆಲೆಯ ಪಾತ್ರವನ್ನು ನಿರ್ವಹಿಸಿದ ಈ ದ್ವೀಪವು ಇಂದು ದೇಶದ ಭದ್ರತೆ ಮತ್ತು ಅಭಿವೃದ್ಧಿಯನ್ನು ವೇಗಗೊಳಿಸಲು ಸಿದ್ಧವಾಗಿದೆ.

“ನಮ್ಮ ಸ್ವಾತಂತ್ರ್ಯ ಹೋರಾಟ ಮತ್ತು ಇತಿಹಾಸದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಸಾಟಿಯಿಲ್ಲದ ಸ್ಥಾನವನ್ನು ಹೊಂದಿವೆ. ಒಂದು ಕಾಲದಲ್ಲಿ ಚೋಳ ಸಾಮ್ರಾಜ್ಯದ ನೌಕಾ ನೆಲೆಯಾಗಿ ಕಾರ್ಯನಿರ್ವಹಿಸಿದ ಈ ದ್ವೀಪ ಪ್ರದೇಶವು ಇಂದು ನಮ್ಮ ಕಾರ್ಯತಂತ್ರ ಮತ್ತು ಅಭಿವೃದ್ಧಿಯ ಮಹತ್ವಾಕಾಂಕ್ಷೆಗಳಿಗೆ ನಿರ್ಣಾಯಕ ನೆಲೆಯಾಗಿದೆ” ಎಂದು ಅಮಿತ್ ಶಾ ಹೇಳಿದ್ದಾರೆ.

ಇದು ನೇತಾಜಿ ಸುಭಾಷ್ ಚಂದ್ರ ಬೋಸ್ ನಮ್ಮ ತ್ರಿವರ್ಣ ಧ್ವಜದ ಮೊದಲ ಅನಾವರಣವನ್ನು ಆಯೋಜಿಸಿದ ಸ್ಥಳವಾಗಿದೆ. ವೀರ್ ಸಾವರ್ಕರ್ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರು ಸ್ವತಂತ್ರ ರಾಷ್ಟ್ರಕ್ಕಾಗಿ ಹೋರಾಡಿದ ಸೆಲ್ಯುಲಾರ್ ಜೈಲು ಇರುವ ಸ್ಥಳವಾಗಿದೆ” ಎಂದು ಗೃಹ ಸಚಿವರು ಹೇಳಿದ್ದಾರೆ.

ಪೋರ್ಟ್ ಬ್ಲೇರ್ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಪ್ರವೇಶ ಬಿಂದುವಾಗಿದೆ. ಈಸ್ಟ್ ಇಂಡಿಯಾ ಕಂಪನಿಯ ಬ್ರಿಟಿಷ್ ವಸಾಹತುಶಾಹಿ ನೌಕಾಪಡೆಯ ಅಧಿಕಾರಿ ಕ್ಯಾಪ್ಟನ್ ಆರ್ಚಿಬಾಲ್ಡ್ ಬ್ಲೇರ್ ಅವರ ಹೆಸರನ್ನು ಈ ನಗರಕ್ಕೆ ಇಡಲಾಗಿತ್ತು.

Share with Friends
author avatar
News Desk