
“ಸಾರ್ವಜನಿಕ ಪ್ರದೇಶ ನಿಯಂತ್ರಣ ವಿಧೇಯಕ-2026″ಕ್ಕೆ ಸಚಿವ ಸಂಪುಟ ಅನುಮೋದನೆ..
ಬೆಂಗಳೂರು: ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ವರ್ಸಸ್ RSS ಸಂಘರ್ಷಕ್ಕೆ ವೇದಿಕೆ ಸಿದ್ಧವಾಗುವ ಲಕ್ಷಣಗಳು ಕಾಣುತ್ತಿವೆ. ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಕರ್ನಾಟಕ ರಾಜ್ಯ ಸಾರ್ವಜನಿಕ ಪ್ರದೇಶ ಪ್ರವೇಶ ನಿಯಂತ್ರಣ ವಿಧೇಯಕ-2026 ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದೆ.
ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಧೇಯಕದ ಕುರಿತು ವಿಸ್ತೃತ ಚರ್ಚೆ ನಡೆದಿದ್ದು, ವಿಧೇಯಕಕ್ಕೆ ಅನುಮೋದನೆ ದೊರೆತಿದೆ. ಇದೇ ಅಧಿವೇಶನದಲ್ಲಿ ವಿಧೇಯಕವನ್ನು ಮಂಡಿಸಲು ಸಂಪುಟ ಒಪ್ಪಿಗೆ ಸೂಚಿಸಿದೆ.
ಈ ಹೊಸ ಕಾಯ್ದೆಯ ಪ್ರಕಾರ, ಸಾರ್ವಜನಿಕ ಪ್ರದೇಶಗಳಲ್ಲಿ ಯಾವುದೇ ಸಂಘಟನೆ ಅಥವಾ ಸಂಸ್ಥೆ ಕಾರ್ಯಕ್ರಮ ಆಯೋಜಿಸುವ ಸಂದರ್ಭದಲ್ಲಿ ಸರ್ಕಾರದಿಂದ ಪೂರ್ವ ಅನುಮತಿ ಪಡೆಯುವುದು ಕಡ್ಡಾಯವಾಗಲಿದೆ. ಅನುಮತಿ ಇಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಸಭೆ, ಸಮಾರಂಭ, ಶಾಖಾ, ಪಥಸಂಚಲನ ನಡೆಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ಈ ವಿಧೇಯಕದ ಮೂಲಕ ರಾಜ್ಯದಲ್ಲಿ ಸಾರ್ವಜನಿಕವಾಗಿ RSS ನಡೆಸುವ ಶಾಖೆ, ಕಾರ್ಯಕ್ರಮ ಮತ್ತು ಕಾರ್ಯಚಟುವಟಿಕೆಗಳಿಗೆ ನಿಯಂತ್ರಣ ಹಾಕಲು ಸರ್ಕಾರ ಮುಂದಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರಾಜಕೀಯ ಅಥವಾ ಸಾಮಾಜಿಕ ಸಂಘಟನೆಗಳ ಚಟುವಟಿಕೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವುದೇ ಇದರ ಉದ್ದೇಶ ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ.
ಆದರೆ ವಿರೋಧ ಪಕ್ಷಗಳು ಮತ್ತು RSS ಇದನ್ನು “ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿ” ಎಂದು ಟೀಕಿಸುವ ಸಾಧ್ಯತೆ ಇದೆ. ಹೀಗಾಗಿ ವಿಧೇಯಕ ಮಂಡನೆಯಾದ ಬಳಿಕ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ವರ್ಸಸ್ RSS ನಡುವಿನ ಕಾಳಗ ತೀವ್ರಗೊಳ್ಳುವ ಸಾಧ್ಯತೆಗಳಿವೆ.
ಈ ವಿಧೇಯಕ ಜಾರಿಯಾದರೆ ರಾಜ್ಯದ ಎಲ್ಲಾ ಸಾರ್ವಜನಿಕ ಉದ್ಯಾನ, ಮೈದಾನ, ರಸ್ತೆಗಳಲ್ಲಿ ನಡೆಯುವ ಯಾವುದೇ ಸಂಘಟನೆಯ ಕಾರ್ಯಕ್ರಮಕ್ಕೂ ಪೊಲೀಸ್ ಮತ್ತು ಸ್ಥಳೀಯ ಆಡಳಿತದ ಅನುಮತಿ ಅಗತ್ಯವಾಗಲಿದೆ.
