BlogLatestTop Storiesರಾಷ್ಟ್ರೀಯ-National

ಬಿಹಾರದ ಬಾಬಾ ಸಿದ್ಧೇಶ್ವರನಾಥ ದೇವಸ್ಥಾನದಲ್ಲಿ ಕಾಲ್ತುಳಿತ, 7 ಭಕ್ತರು ಸಾವು

ಪಾಟ್ನಾ: ಬಿಹಾರದ ಜಿಹಾನಾಬಾದ್‌ ಜಿಲ್ಲೆಯ ದೇವಸ್ಥಾನವೊಂದರಲ್ಲಿ ಜನಸಂದಣಿ ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಲಘು ಲಾಠಿ ಪ್ರಹಾರ ಮಾಡಿದ ಪರಿಣಾಮ ಕಾಲ್ತುಳಿತ ಉಂಟಾಗಿ 3 ಮಹಿಳೆಯರು ಸೇರಿ 7 ಮಂದಿ ಭಕ್ತರು ಸಾವನ್ನಪ್ಪಿದ್ದಾರೆ.

ಶ್ರಾವಣ ಮಾಸದ 4ನೇ ಸೋಮವಾರದಂದು ಬರಾವರ್ ಬೆಟ್ಟದ ಬಾಬಾ ಸಿದ್ಧೇಶ್ವರನಾಥ ದೇವಸ್ಥಾನದಲ್ಲಿ ಕಾಲ್ತುಳಿತ ಸಂಭವಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರು. ಈ ಅವಘಡದಲ್ಲಿ ಏಳು ಮಂದಿ ಸಾವನ್ನಪ್ಪಿದ್ದು, ಸುಮಾರು 35 ಮಂದಿ ಗಾಯಗೊಂಡಿದ್ದಾರೆ.

ಪ್ರತಿ ವರ್ಷ ಪವಿತ್ರ ಶ್ರಾವಣ ಮಾಸದಲ್ಲಿ ನಡೆಯುವ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಾರೆ. ಅದೇ ರೀತಿ ಭಾನುವಾರ ತಡರಾತ್ರಿಯಿಂದಲೇ ಭಕ್ತರು ಜಮಾಯಿಸಿದ್ದರು. ಈ ಸಂದರ್ಭದಲ್ಲಿ ಶಿವನಿಗೆ ಜಲಾಭಿಷೇಕ ಅರ್ಪಿಸಲು ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ನೂಕುನುಗ್ಗಲು ಶುರುವಾಗಿತ್ತು. ಜನಸಂದಣಿ ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಬಲಪ್ರಯೋಗ ನಡೆಸಿದ್ದರಿಂದ ಕಾಲ್ತುಳಿತ ಉಂಟಾಗಿದೆ.

ಈ ವೇಳೆ ಆಡಳಿತದ ಅವ್ಯವಸ್ಥೆಯಿಂದಾಗಿ ಕಾಲ್ತುಳಿತ ಉಂಟಾಗಿದೆ ಎಂದು ದೇವಾಲಯದಲ್ಲಿ ಹಾಜರಿದ್ದವರು ದೂರಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಹತ್ರಾಸ್‌ನ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ ಉಂಟಾಗಿ ಹತ್ತಾರು ಮಂದಿ ಸಾವನ್ನಪ್ಪಿದ್ದರು. ಅದೇ ರೀತಿಯ ಘಟನೆ ಬಿಹಾರದಲ್ಲಿ ನಡೆದಿದೆ.

Share with Friends
author avatar
News Desk