
ಬಿಡದಿ ಕದನ,ಕುಮಾರಸ್ವಾಮಿ- ಡಿಕೆಶಿ ಮಧ್ಯೆ ಟಾಕ್ ಫೈಟ್..!!
ಬೆಂಗಳೂರು,ಜು.15: ಬಿಡದಿ ವಿಚಾರದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಸಿಎಂ ಡಿ ಕೆ ಶಿವಕುಮಾರ್ ಗುಡುಗಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ಜೈಲಿಗೆ ಕಳುಹಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ.
ನಾನು ಸಿಎಂ ಆಗಿದ್ದಕ್ಕೆ ಕೆಲವರಿಗೆ ನಿದ್ದೆಯೇ ಬರುತ್ತಿಲ್ಲ,ಡಿ ಕೆ ಶಿವಕುಮಾರ್ ಜೈಲಿಗೆ ಹೋಗುವ ದಿನ ಸನ್ನಿಹಿತವಾಗಿದೆ ಎಂದು ಹೆಚ್ ಡಿ ಕುಮಾರಸ್ವಾಮಿ ಮಾಧ್ಯಮಗಳ ಮುಂದೆ ಹೇಳಿದ್ದನ್ನು ನೋಡಿದ್ದೇನೆ,ನನಗೇನು ಜೈಲು ಅನುಭವ ಹೊಸದಲ್ಲ,ಅವರ ಇಚ್ಛೆಯಂತೆ ಆಗುವುದಾದರೆ ಆಗಲಿ,ನನ್ನನ್ನು ಜೈಲಿಗೆ ಕಳುಹಿಸಲು ಏನೇನು ಕುತಂತ್ರ ಮಾಡಿದರು ಎಂಬುದನ್ನೆಲ್ಲ ಮುಂದೆ ಹೇಳುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಬಿಡದಿ ಟೌನ್ ಶಿಪ್ ಯೋಜನೆಯ ಪಿತಾಮಹ ನಾನಲ್ಲ,ನಾನು ರೈತನ ಮಗ, ವ್ಯವಸಾಯ ಮಾಡದಿದ್ದರೂ ಹುಟ್ಟಿನಿಂದ ಬೇಸಾಯಗಾರನ ಮಗ, ನನಗೆ ರೈತರ ಕಷ್ಟದ ಬಗ್ಗೆ ಅನುಭವವಿದೆ. ಹುಟ್ಟುತ್ತಲೇ ನಾನು ಕೃಷಿಕನ ಮಗ, ಹೀಗಿರುವಾಗ ನಾನು ರೈತರ ವಿರುದ್ಧ ನಿರ್ಧಾರ ತೆಗೆದುಕೊಳ್ಳುತ್ತೇನೆಯೇ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ದೇವೇಗೌಡರು ಇಳಿ ವಯಸ್ಸಿನಲ್ಲಿ ವಿಧಾನಸೌಧ ಮುಂದೆ ಬಂದು ಧರಣಿ ನಡೆಸುವ ಅಗತ್ಯವಿಲ್ಲ. ಬಿಡದಿ ಸುತ್ತಮುತ್ತ ರೈತ ಮಹಿಳೆಯರು ತಾಯಂದಿರು ನಮ್ಮ ಅಧಿಕಾರಿಗಳಿಗೆ ಪೊರಕೆಯಿಂದ ಹೊಡೆಯುವ ಅಗತ್ಯವಿಲ್ಲ, ನನಗೆ ಬೇಕಾದರೆ ಹೊಡೆಯಲಿ, ಸಹಿಸಿಕೊಳ್ಳುತ್ತೇನೆ, ಬಲವಂತವಾಗಿ ರೈತರ ಜಮೀನನ್ನು ಕಿತ್ತುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
