
ಮರುಬಳಕೆಯ ಅಡುಗೆ ಎಣ್ಣೆಗೆ ಕಡಿವಾಣ..!
ಬೆಂಗಳೂರು.ಸೆ.30- ಉಪ್ಪು ಮತ್ತು ಸಕ್ಕರೆಯ ಬಳಕೆಯ ನಿಯಂತ್ರಣದ ಬಳಿಕ ಇದೀಗ ಮರುಬಳಕೆಯ ಅಡುಗೆ ಎಣ್ಣೆಯ ಬಳಕೆಗೂ ಕಡಿವಾಣ ಹಾಕಲು ಆರೋಗ್ಯ ಇಲಾಖೆ ಮುಂದಾಗಿದೆ. ಹೋಟೆಲ್, ರೆಸ್ಟೋರೆಂಟ್, ಬೇಕರಿ ಸೇರಿದಂತೆ ಆಹಾರ ತಯಾರಿಕಾ ಘಟಕಗಳಲ್ಲಿ ಒಂದೇ ಎಣ್ಣೆಯನ್ನು ಪದೇಪದೇ ಬಿಸಿ ಮಾಡಿ ಬಳಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿ ರೂಪಿಸಲಾಗುತ್ತಿದೆ.
ಮಾರ್ಗಸೂಚಿಯ ಪ್ರಕಾರ, ಅಡುಗೆ ಎಣ್ಣೆಯನ್ನು ಮೂರು ಬಾರಿಗಿಂತ ಹೆಚ್ಚು ಬಿಸಿ ಮಾಡಿ ಮರುಬಳಕೆ ಮಾಡದಂತೆ ಸೂಚಿಸಲಾಗುತ್ತದೆ. ಎಣ್ಣೆಯನ್ನು ಪದೇಪದೇ ಬಿಸಿ ಮಾಡುವುದರಿಂದ ಟೋಟಲ್ ಪೋಲಾರ್ ಕಾಂಪೌಂಡ್ಸ್ ಪ್ರಮಾಣ ಹೆಚ್ಚಾಗುತ್ತದೆ. ಟಿಪಿಸಿ ಪ್ರಮಾಣ ಶೇ.25ಕ್ಕಿಂತ ಹೆಚ್ಚಾದ ಎಣ್ಣೆಯನ್ನು ಆಹಾರ ತಯಾರಿಕೆಗೆ ಬಳಸಬಾರದು ಎಂಬ ನಿಯಮ ಜಾರಿಗೆ ಬರಲಿದೆ.
ಎಣ್ಣೆಯಲ್ಲಿ ನೀಲಿ-ಬೂದು ಬಣ್ಣದ ಹೊಗೆ ಅಥವಾ ಅತಿಯಾದ ನೊರೆ ಕಾಣಿಸಿಕೊಳ್ಳುವುದು, ಎಣ್ಣೆ ಕಪ್ಪಾಗುವುದು ಹಾಗೂ ಅದರ ಗಾಢತೆ ಬದಲಾಗುವುದು ಕಂಡುಬಂದರೆ ಅಂತಹ ಎಣ್ಣೆಯನ್ನು ತಕ್ಷಣವೇ ತ್ಯಜಿಸುವಂತೆ ಸೂಚಿಸಲಾಗುತ್ತಿದೆ. ಒಮ್ಮೆ ಬಳಸಿದ ಎಣ್ಣೆಯನ್ನು ದೀರ್ಘಕಾಲ ಸಂಗ್ರಹಿಸದೆ ಸಾಧ್ಯವಾದಷ್ಟು ಬೇಗ ಬಳಸುವುದು ಅಥವಾ ಸೂಕ್ತವಾಗಿ ವಿಲೇವಾರಿ ಮಾಡುವಂತೆ ಸೂಚನೆ ನೀಡಲಾಗುತ್ತದೆ.
ಬಳಸಿದ ಎಣ್ಣೆಯಿಂದ ಬಯೋಡೀಸೆಲ್ :
ಮನೆಗಳು ಹಾಗೂ ಹೋಟೆಲ್ಗಳಲ್ಲಿ ಉಳಿಯುವ ಬಳಸಿದ ಅಡುಗೆ ಎಣ್ಣೆಯನ್ನು ಕಸಕ್ಕೆ ಸುರಿಯುವ ಬದಲು ಸಂಗ್ರಹಿಸಿ ಆರ್ಯುಸಿಒ
ಯೋಜನೆಯಡಿ ಬಯೋಡೀಸೆಲ್ ಉತ್ಪಾದನೆಗೆ ಬಳಸುವ ವ್ಯವಸ್ಥೆಗೆ ಒತ್ತು ನೀಡಲಾಗುತ್ತಿದೆ.
ಹೋಟೆಲ್,ರೆಸ್ಟೋರೆಂಟ್ ಹಾಗೂ ಬೇಕರಿಗಳು ಬಳಸಿದ ಎಣ್ಣೆಯ ಸಂಗ್ರಹಣೆ ಮತ್ತು ವಿಲೇವಾರಿಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಎಣ್ಣೆಯ ಬಳಕೆ ಹಾಗೂ ವಿಲೇವಾರಿ ಕುರಿತ ದಾಖಲೆಗಳನ್ನು ನಿರ್ವಹಿಸುವುದನ್ನು ಕಡ್ಡಾಯಗೊಳಿಸುವ ಸಾಧ್ಯತೆಯೂ ಇದೆ.
ಮರುಬಳಕೆಯ ಎಣ್ಣೆಯ ನಿಯಂತ್ರಣದ ಮೂಲಕ ಆಹಾರದ ಗುಣಮಟ್ಟ ಕಾಪಾಡುವುದರ ಜತೆಗೆ ಸಾರ್ವಜನಿಕರ ಆರೋಗ್ಯದ ಮೇಲಿನ ಅಪಾಯವನ್ನು ಕಡಿಮೆ ಮಾಡುವ ಉದ್ದೇಶವನ್ನು ಇಲಾಖೆ ಹೊಂದಿದೆ.
