LatestTop Storiesಕಲಬುರಗಿ-Kalaburagi

ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ : ಎರಡು ಪ್ರತ್ಯೇಕ ಪ್ರಕರಣ ದಾಖಲು

ಕಲಬುರಗಿ.ಸೆ.29 – ಗೃಹ ಸಚಿವರ ತವರು ಜಿಲ್ಲೆ ಕಲಬುರಗಿಯಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಹಾಗೂ ಸಂಗ್ರಹಣೆ ಮಾಡುತ್ತಿದ್ದ ಆರೋಪ ಕೇಳಿಬಂದಿದ್ದು,ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಆಳಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನ್ನಭಾಗ್ಯ ಅಕ್ಕಿಯನ್ನು ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಕಲಬುರಗಿಯ ಸುಲ್ತಾನ್‌ಪುರ ಕ್ರಾಸ್‌ನಿಂದ ಮಹಾರಾಷ್ಟ್ರದತ್ತ ತೆರಳುತ್ತಿದ್ದ ಏಂ-32-AA-4831 ನೋಂದಣಿ ಸಂಖ್ಯೆಯ ಐಚರ್ ವಾಹನವನ್ನು ಆಳಂದ ಆರ್‌ಟಿಒ ಚೆಕ್‌ಪೋಸ್ಟ್ ಬಳಿ ತಪಾಸಣೆ ನಡೆಸಿ ವಶಕ್ಕೆ ಪಡೆಯಲಾಗಿದೆ.

ವಾಹನದಲ್ಲಿ ಸುಮಾರು 110ರಿಂದ 120 ಅಕ್ಕಿ ಪಾಕೆಟ್‌ಗಳು ಪತ್ತೆಯಾಗಿವೆ. ವಾಹನದ ಚಾಲಕ ಸಮೀರ್ ಪಟೇಲ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಶರಣು ಅವರಾದಿಗೆ ಸೇರಿದ ಗೋದಾಮಿನಿಂದ ಅಕ್ಕಿ ಸಾಗಿಸಲಾಗುತ್ತಿತ್ತು ಎನ್ನಲಾಗಿದ್ದು,ಈ ಸಂಬಂಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೊಂದೆಡೆ, ಕಲಬುರಗಿ ನಗರದ ಹಗರಗಾ ಕ್ರಾಸ್ ಬಳಿ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಎನ್ನಲಾದ ಅನ್ನಭಾಗ್ಯ ಅಕ್ಕಿಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಕ್ವಿಂಟಾಲ್ ಅಕ್ಕಿ ಪತ್ತೆಯಾಗಿದೆ.

ಆಹಾರ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಅಕ್ಕಿ ಸಂಗ್ರಹಿಸಿದ್ದವರು ಪರಾರಿಯಾಗಿದ್ದಾರೆ. ಮನೆ ಬಾಡಿಗೆಗೆ ಪಡೆದು ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದರು ಎನ್ನಲಾಗಿದ್ದು, ಈ ಪ್ರಕರಣ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ.ಎರಡೂ ಪ್ರಕರಣಗಳ ಕುರಿತು ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

Share with Friends
author avatar
Digital Desk