ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ ಮಹೂರ್ತ ಫಿಕ್ಸ್
ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿ ಪ್ರದೇಶ ಎಂದು ಘೋಷಿಸಿದ ನಂತರ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ಎದುರಿಸುತ್ತಿದ್ದು, ಸೆಪ್ಟೆಂಬರ್ 18, ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 1 ರಂದು ಮೂರು ಹಂತದಲ್ಲಿ ಮತದಾನ ನಡೆಯಲಿದೆ.ಅಕ್ಟೋಬರ್ 04ರಂದು ಜಮ್ಮುಕಾಶ್ಮೀರ ಚುನಾವಣೆಯ ಫಲಿತಾಂಶ ಹೊರ ಬೀಳಲಿದೆ. ಕೇಂದ್ರ ಚುನಾವಣಾ ಆಯೋಗ ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದೆ.
ಇಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು, “ನಾವು ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣಕ್ಕೆ ಭೇಟಿ ನೀಡಿ, ಚುನಾವಣಾ ಸಿದ್ಧತೆಗಳನ್ನು ಪರಿಶೀಲಿಸಿದ್ದೇವೆ. ಜನರಲ್ಲಿ ಹೆಚ್ಚಿನ ಉತ್ಸಾಹ ಕಂಡುಬಂದಿದೆ. ಅವರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ಬಯಸಿದ್ದಾರೆ. ಜನರು ಚುನಾವಣೆಗಳನ್ನು ಬಯಸುತ್ತಾರೆ ಎಂದರು.
90 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ ಎಂದು ರಾಜೀವ್ ಕುಮಾರ್ ಅವರು ತಿಳಿಸಿದರು.
ಇದೇ ವೇಳೆ 90 ವಿಧಾನಸಭಾ ಕ್ಷೇತ್ರಗಳಿರುವ ಹರಿಯಾಣಕ್ಕೂ ಚುನಾವಣೆ ಘೋಷಿಸಿದ ರಾಜೀವ್ ಕುಮಾರ್ ಅವರು, ಅಕ್ಟೋಬರ್ 1 ರಂದು ಹರಿಯಾಣದ ವಿಧಾನಸಭೆ ಚುನಾವಣೆ ನಡೆಯಲಿದ್ದು, ಎರಡೂ ರಾಜ್ಯಗಳ ಮತ ಎಣಿಕೆ ಅಕ್ಟೋಬರ್ 4 ರಂದು ನಡೆಯಲಿದೆ ಎಂದರು.
ಹರಿಯಾಣದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಸೆಪ್ಟೆಂಬರ್ 12ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಸೆಪ್ಟೆಂಬರ್ 16ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.
2019 ರಲ್ಲಿ ಜಮ್ಮು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿ ಸಂವಿಧಾನದ 370ನೇ ವಿಧಿಯಲ್ಲಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲಾಗಿತ್ತು. ಅಂದಿನಿಂದ ಜಮ್ಮು ಮತ್ತು ಕಾಶ್ಮೀರವು ಲೆಫ್ಟಿನೆಂಟ್ ಗವರ್ನರ್ ಆಳ್ವಿಕೆಯಲ್ಲಿದೆ.
ಮಹಾರಾಷ್ಟ್ರದ ವಿಧಾನಸಭಾ ಚುನಾವಣೆ ವಿಳಂಬ :
ಇಂದು ಕೇಂದ್ರ ಚುನಾವಣಾ ಆಯೋಗದ ಕಮಿಷನರ್ ಸುದ್ದಿಗೋಷ್ಠಿ ನಡೆಸಿದಾಗ ಜನರಲ್ಲಿ ಅನೇಕ ಕುತೂಹಲಗಳಿದ್ದವು. ಜಮ್ಮು ಕಾಶ್ಮೀರ, ಹರಿಯಾಣ ವಿಧಾನಸಭಾ ಚುನಾವಣೆಗಳ ಜೊತೆ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯ ದಿನಾಂಕ ಹಾಗೂ ಕರ್ನಾಟಕದಲ್ಲಿ ನಡೆಯಬೇಕಾದ 3 ಬೈ ಎಲೆಕ್ಷನ್ಗಳ ದಿನಾಂಕವೂ ಕೂಡ ಘೋಷಣೆಯಾಗುತ್ತದೆ ಎಂದು ಕೊಂಡಿದ್ರು. ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿದ ಚುನಾವಣಾ ಆಯೋಗದ ಆಯುಕ್ತರ ರಾಜೀವ್ ಕುಮಾರ್, ಕೇವಲ ಹರಿಯಾಣ ಹಾಗೂ ಜಮ್ಮು ಕಾಶ್ಮೀರದ ಚುನಾವಣಾ ದಿನಾಂಕವನ್ನು ಮಾತ್ರ ಘೋಷಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ರಾಜೀವ್ ಕುಮಾರ್ ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಿಸುವುದು ಕೊಂಚ ವಿಳಂಬವಾಗುತ್ತದೆ. ಜಮ್ಮು ಕಾಶ್ಮೀರದಲ್ಲಿ ಸದ್ಯ ಹೆಚ್ಚು ಸೆಕ್ಯೂರಿಟಿಯ ಅಗತ್ಯ ಇರೋದ್ರಿಂದಾಗಿ ಉಳಿದ ರಾಜ್ಯಗಳ ಚುನಾವಣೆಯನ್ನು ಈಗ ಘೋಷಿಸಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಸದ್ಯ ಮಹಾರಾಷ್ಟ್ರದಲ್ಲಿ ಬೀಳುತ್ತಿರುವ ಮಳೆ ಸದ್ಯದಲ್ಲಿಯೇ ಇರುವ ಸಾಲು ಸಾಲು ಹಬ್ಬಗಳು ಇವೆ. ಪಿತೃಪಕ್ಷ , ಗಣೇಶ ಚತುರ್ಥಿ ಸೇರಿದಂತೆ ಹಲವು ಹಬ್ಬಗಳು ಇರುವುದರಿಂದ ಈಗ ಚುನಾವಣೆ ಮಾಡುವ ವಾತಾವರಣ ಮಹಾರಾಷ್ಟ್ರದಲ್ಲಿ ಇಲ್ಲ, ಹೀಗಾಗಿ ಕೆಲವು ದಿನಗಳ ಬಳಿಕ ಮಹಾರಾಷ್ಟ್ರದ ಚುನಾವಣೆಯನ್ನು ಘೋಷಿಸಲಾಗುವುದು ಎಂದು ರಾಜೀವ್ ಕುಮಾರ್ ಹೇಳಿದ್ದಾರೆ.
ಇನ್ನು ಕರ್ನಾಟಕದ ಚನ್ನಪಟ್ಟಣ, ಸಂಡೂರು, ಶಿಗ್ಗಾವಿಯಲ್ಲಿಯೂ ಕೂಡ ಉಪಚುನಾವಣೆ ನಡೆಯಬೇಕಿದೆ. ಅದರ ದಿನಾಂಕವು ಕೂಡ ಮಹಾರಾಷ್ಟ್ರ ಚುನಾವಣೆ ದಿನಾಂಕ ಘೋಷಣೆಯಾದಾಗಲೇ ಆಗುವ ಸಾಧ್ಯತೆ ಇದೆ. ಒಟ್ಟು ದೇಶದಲ್ಲಿ 47 ಉಪಚುನಾವಣೆಗಳು ನಡೆಯಬೇಕಿದೆ. 46 ವಿಧಾನಸಭೆ ಹಾಗೂ ಒಂದು ಲೋಕಸಭೆ. ಹಲವು ರಾಜ್ಯಗಳಲ್ಲಿ ವಾತಾವರಣ ಸರಿಯಿಲ್ಲ. ಬಹಳಷ್ಟು ಕಡೆ ಹವಾಮಾನದ ವೈಪರಿತ್ಯವಿದೆ ಈ ಹಿನ್ನೆಲೆ ಆರು ತಿಂಗಳು ಒಳಗಾಗಿ ಏಕಕಾಲದಲ್ಲಿ ಈ ಚುನಾವಣೆಗಳು ನಡೆಯಲಿವೆ ಎಂದು ಚುನಾವಣಾ ಆಯೋಗ ಹೇಳಿದೆ.
ಅದೇ ತಿಂಗಳಲ್ಲಿ ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭಾ ಚುನಾವಣೆ ಘೋಷಿಸುವ ಸಾಧ್ಯತೆ ಇದೆ. ಆಗಲೇ ಕೇಂದ್ರ ಚುನಾವಣಾ ಆಯೋಗವು ಕರ್ನಾಟಕದ ಚನ್ನಪಟ್ಟಣ, ಸಂಡೂರು, ಶಿಗ್ಗಾವಿಯ ಉಪಚುನಾವಣೆಗೂ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ.
