ಜೈಲಿನಿಂದ ಬಿಡುಗಡೆಯಾಗಿ ಬಿಲ್ಡಪ್ ರ್ಯಾಲಿ ನಡೆಸಿದ ಗ್ಯಾಂಗ್ಸ್ಟರ್ ಮತ್ತೆ ಅರೆಸ್ಟ್
ಮುಂಬೈ : ಮಹಾರಾಷ್ಟ್ರದ ಜೈಲಿನಿಂದ ಬಿಡುಗಡೆಯಾದ ನಂತರ ತನ್ನ ಬೆಂಬಲಿಗರು ಆಯೋಜಿಸಿದ್ದ ರ್ಯಾಲಿಯಲ್ಲಿ ಸಂಭ್ರಮಾಚರಿಸಿದ ದರೋಡೆಕೋರನನ್ನು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಮತ್ತೆ ಜೈಲಿಗೆ ಕಳುಹಿಸಲಾಗಿದೆ.
ಜೈಲಿನಿಂದ ಬಿಡುಗಡೆಯಾದ ದರೋಡೆಕೋರ ಹರ್ಷದ್ ಪಾಟಂಕರ್ನನ್ನು ಸ್ವಾಗತಿಸಲು ಆತನ ಬೆಂಬಲಿಗರು ಮಹಾರಾಷ್ಟ್ರದ ನಾಸಿಕ್ನ ಬೆತೆಲ್ ನಗರದಿಂದ ಅಂಬೇಡ್ಕರ್ ಚೌಕ್ವರೆಗೆ ಕಾರು ಮೆರವಣಿಗೆ ಮತ್ತು ದ್ವಿಚಕ್ರ ವಾಹನಗಳ ರ್ಯಾಲಿಯನ್ನು ನಡೆಸಿದ್ದರು.
ಈ ದೃಶ್ಯ ಇದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ವಿಡಿಯೋದಲ್ಲಿ ಕಾರಿನ ಸನ್ರೂಫ್ನಿಂದ ಹೊರಬರುವಾಗ ಪಾಟಂಕರ್ ತನ್ನ ಬೆಂಬಲಿಗರತ್ತ ಕೈ ಬೀಸುತ್ತಿರುವುದನ್ನು ಕಾಣಬಹುದು. ಆತನ ಬೆಂಬಲಿಗರು ಕಮ್ಬ್ಯಾಕ್ ಶೀರ್ಷಿಕೆಯಲ್ಲಿ ರೀಲ್ಗಳನ್ನು ಮಾಡಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ವ್ಯಾಪಕ ಖಂಡನೆ, ಟೀಕೆಗಳು ವ್ಯಕ್ತವಾಗಿದ್ದು, ಇದರ ವಿರುದ್ಧ ವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅನಧಿಕೃತ ರ್ಯಾಲಿ ನಡೆಸಿ ಗೊಂದಲ ಸೃಷ್ಟಿಸಿದ್ದಕ್ಕಾಗಿ ಪಾಟಂಕರ್ ಮತ್ತವನ ಆರು ಸಹಾಯರನ್ನು ಪೊಲೀಸರು ಬಂಧಿಸಿದ್ದಾರೆ.
ನಾಸಿಕ್ನ ದರೋಡೆಕೋರ ಹರ್ಷದ್ ಪಾಟಂಕರ್ ಅವರನ್ನು ಮಹಾರಾಷ್ಟ್ರದ ಕೊಳೆಗೇರಿಗಳು, ಕಾಳಧನಿಕರು, ಮಾದಕವಸ್ತು ಅಪರಾಧಿಗಳು ಮತ್ತು ಅಪಾಯಕಾರಿ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ (ಎಂಪಿಡಿಎ)ಯಡಿ ಜೈಲಿಗೆ ಹಾಕಲಾಯಿತು.ಪಾಟಂಕರ್ ವಿರುದ್ಧ ಕೊಲೆ ಯತ್ನ, ಕಳ್ಳತನ, ಹಿಂಸಾಚಾರ ಸೇರಿದಂತೆ ಹಲವು ಪೊಲೀಸ್ ಪ್ರಕರಣಗಳು ದಾಖಲಾಗಿವೆ.
