LatestTop Storiesಬೆಂಗಳೂರು-Bengaluru

ರಸ್ತೆಗಳಲ್ಲಿ ಬಿಡಾಡಿ ಜಾನುವಾರುಗಳಿಗೆ ಕಡಿವಾಣ

ಬೆಂಗಳೂರು .ಅ.9- ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆಗಳಲ್ಲಿ ಬಿಡಾಡಿಯಾಗಿ ಸಂಚರಿಸುವ ದನ, ಹಸು, ಎಮ್ಮೆ, ಎತ್ತು ಸೇರಿದಂತೆ ಜಾನುವಾರುಗಳನ್ನು ನಿಯಂತ್ರಿಸಲು ವಿಶೇಷ ಕಾರ್ಯಾಚರಣೆ ಆರಂಭಿಸಲಾಗಿದೆ.

ರಸ್ತೆಗಳಲ್ಲಿ ಜಾನುವಾರುಗಳ ಸಂಚಾರದಿAದ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೊಂದರೆಯಾಗುವುದಲ್ಲದೆ, ಅಪಘಾತದ ಅಪಾಯವೂ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ವತಿಯಿಂದ ಹೈಡ್ರಾಲಿಕ್ ದನ ಹಿಡಿಯುವ ವಾಹನ ಬಳಸಿ ಜಾನುವಾರುಗಳನ್ನು ವಶಕ್ಕೆ ಪಡೆಯಲಾಗುತ್ತಿದೆ.

ರಸ್ತೆಯಲ್ಲಿ ಸಿಗುವ ಜಾನುವಾರುಗಳನ್ನು ವಶಕ್ಕೆ ಪಡೆದು ಆಶ್ರಯ ಕೇಂದ್ರಕ್ಕೆ ಸ್ಥಳಾಂತರಿಸಲಾಗುತ್ತದೆ. ಪೂರ್ವ ಪಾಲಿಕೆ ವ್ಯಾಪ್ತಿಯಲ್ಲಿ ದನದ ದೊಡ್ಡಿ ನಿರ್ಮಾಣವಾಗುವವರೆಗೆ, ವಶಪಡಿಸಿಕೊಳ್ಳಲಾದ ಜಾನುವಾರುಗಳನ್ನು ಕೆ.ಆರ್. ಮಾರ್ಕೆಟ್‌ನ ದನದ ದೊಡ್ಡಿಗೆ ಕಳುಹಿಸಲಾಗುತ್ತದೆ.

ಮಾಲೀಕರಿರುವ ಜಾನುವಾರುಗಳಿಗೆ ನಿಯಮಾನುಸಾರ ದಂಡ ವಿಧಿಸಲಾಗುತ್ತದೆ. ದಂಡ ಹಾಗೂ ನಿರ್ವಹಣಾ ಶುಲ್ಕ ಪಾವತಿಸಿದ ಬಳಿಕವೇ ಜಾನುವಾರುಗಳನ್ನು ಮಾಲೀಕರಿಗೆ ಹಸ್ತಾಂತರಿಸಲಾಗುತ್ತದೆ. ಪದೇಪದೇ ಜಾನುವಾರುಗಳನ್ನು ರಸ್ತೆಗಿಳಿಸುವ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪಾಲಿಕೆ ಎಚ್ಚರಿಸಿದೆ.

ಮಾಲೀಕರಿಲ್ಲದ ಜಾನುವಾರುಗಳನ್ನು ನಿಯಮಾನುಸಾರ ಗೋಶಾಲೆಗೆ ಹಸ್ತಾಂತರಿಸಲಾಗುತ್ತದೆ.ಜೊತೆಗೆ ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಕಾರ್ಯಾಚರಣೆ ನಡೆಯಲಿದ್ದು,ಸರ್ಕಾರಿ ರಜಾದಿನಗಳಲ್ಲಿ ಕಾರ್ಯಾಚರಣೆ ಇರುವುದಿಲ್ಲ ಎಂದು ಪಾಲಿಕೆ ತಿಳಿಸಿದೆ.

ದಂಡದ ವಿವರ

ದನ, ಹಸು, ಎತ್ತು, ಎಮ್ಮೆ: ಮೊದಲ 3 ದಿನ 600; ನಂತರ ಪ್ರತಿದಿನ-300.

ಕರು: ಮೊದಲ 3 ದಿನ 300; ನಂತರ ಪ್ರತಿದಿನ-200.

ಕುದುರೆ, ಹೇಸರಗತ್ತೆ: ಮೊದಲ 3 ದಿನ 100; ನಂತರ ಪ್ರತಿದಿನ 50.

ಕತ್ತೆ, ಹಂದಿ: ಮೊದಲ 3 ದಿನ 50; ನಂತರ ಪ್ರತಿದಿನ 25.

ಕುರಿ, ಮೇಕೆ ಮತ್ತು ಮರಿಗಳು: ಮೊದಲ 3 ದಿನ 25.

Share with Friends
author avatar
Digital Desk