LatestTop Storiesಬೆಂಗಳೂರು-Bengaluru

ಕರ್ನಾಟಕದಲ್ಲಿ ನೋ ಮ್ಯಾಪಿಂಗ್ ಮತದಾರರ ವಿಚಾರಣೆ ತೀವ್ರ

ಬೆಂಗಳೂರು.ಅ.3-ಚುನಾವಣಾ ಆಯೋಗದ ವಿರುದ್ಧ ರಾಜ್ಯದಲ್ಲಿ ಪ್ರತಿಭಟನೆ ಹಾಗೂ ಆಕ್ಷೇಪಣೆಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಡಿ ನೋ ಮ್ಯಾಪಿಂಗ್ ಮತದಾರರ ವಿಚಾರಣೆ ಚುರುಕುಗೊಂಡಿದೆ.

ರಾಜ್ಯದಲ್ಲಿ ನೋ ಮ್ಯಾಪಿಂಗ್ ಎಂದು ಗುರುತಿಸಲಾದ ಸುಮಾರು 43.43 ಲಕ್ಷ ಮತದಾರರಿಗೆ ನೋಟಿಸ್ ನೀಡಲಾಗಿದ್ದು, ಈ ಪೈಕಿ 33.60 ಲಕ್ಷ ಮತದಾರರ ವಿಚಾರಣೆ ಪೂರ್ಣಗೊಂಡಿದೆ.ಅಂದರೆ, ಒಟ್ಟು ವಿಚಾರಣೆಯ 81.99ರಷ್ಟು ಪ್ರಕ್ರಿಯೆ ಪೂರ್ಣಗೊಂಡಿದೆ. ಇನ್ನೂ ಸುಮಾರು 7.82 ಲಕ್ಷ ಮತದಾರರ ವಿಚಾರಣೆ ಬಾಕಿ ಇದೆ.

ಕೇಂದ್ರ ಚುನಾವಣಾ ಆಯೋಗದ ಸೂಚನೆಯಂತೆ, ಬೂತ್ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ತೆರಳಿ ಮತದಾರರ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.ನಿಗದಿತ ದಾಖಲೆ ಪಡೆದು ಇಸಿಐಎನ್‌ಇಟಿ ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಲಾಗುತ್ತಿದೆ.

ನೋ ಮ್ಯಾಪಿಂಗ್‌ಗೆ ಸಂಬಂಧಿಸಿದ ವಿಚಾರಣೆ ಪ್ರಕ್ರಿಯೆ ಅ.12ರಂದು ಅಂತ್ಯಗೊಳ್ಳಲಿದೆ.ಆಕ್ಷೇಪಣೆ ಮತ್ತು ಕ್ಲೇಮ್‌ಗಳ ವಿಲೇವಾರಿ ಬಳಿಕ ಅ.22ರಿಂದ 27ರ ಅವಧಿಯಲ್ಲಿ ಅಂತಿಮ ಮತದಾರರ ಪಟ್ಟಿ ಪ್ರಕಟಿಸುವ ಪ್ರಕ್ರಿಯೆ ನಡೆಯಲಿದೆ.

ಇದೇ ವೇಳೆ, ರಾಜ್ಯದಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು 8.85 ಲಕ್ಷ ಮಂದಿ ಫಾರ್ಮ್-6 ಮೂಲಕ ಅರ್ಜಿ ಸಲ್ಲಿಸಿದ್ದಾರೆ. ವಿದೇಶದಲ್ಲಿರುವ 4,648 ಮಂದಿ ಫಾರ್ಮ್-6ಎ ಮೂಲಕ ಹೊಸದಾಗಿ ನೋಂದಣಿಗೆ ಅರ್ಜಿ ಸಲ್ಲಿಸಿದ್ದಾರೆ.

ಮತ್ತೊಂದೆಡೆ, ತಮ್ಮ ಹೆಸರು ಮತದಾರರ ಪಟ್ಟಿಯಿಂದ ಅಳಿಸಲು 84,900 ಮಂದಿ ಫಾರ್ಮ್-7ರಲ್ಲಿ ಸಲ್ಲಿಸಿದ್ದಾರೆ. ಹೆಸರು ಅಥವಾ ಇತರ ವಿವರಗಳಲ್ಲಿ ತಿದ್ದುಪಡಿ ಕೋರಿ 11.78 ಲಕ್ಷ ಮತದಾರರು ಅರ್ಜಿ ಸಲ್ಲಿಸಿದ್ದಾರೆ.

ಆಯೋಗದ ಅಂಕಿ-ಅಂಶಗಳ ಪ್ರಕಾರ, ಈ ಎಲ್ಲಾ ಅರ್ಜಿಗಳು, ಆಕ್ಷೇಪಣೆಗಳು ಮತ್ತು ದಾಖಲೆಗಳ ಪರಿಶೀಲನೆಯ ಬಳಿಕ ಅಂತಿಮ ಮತದಾರರ ಪಟ್ಟಿಯಲ್ಲಿ ಬದಲಾವಣೆಗಳು ಸಂಭವಿಸಲಿವೆ.

Share with Friends
author avatar
Digital Desk