LatestTop Storiesಬೆಂಗಳೂರು-Bengaluruರಾಜಕೀಯ | Politics

ಕೆಪಿಎಸ್‌ಸಿ ಅಕ್ರಮ: RTO ಡೀಲಿಂಗ್ ಡೈರಿ ಬಗ್ಗೆ ಇಡಿ ತನಿಖೆ

ಬೆಂಗಳೂರು.ಅ.1- ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಮುಂದುವರಿದಿರುವ ಬೆನ್ನಲ್ಲೇ,ಆರ್‌ಟಿಓ ಇಲಾಖೆಯಲ್ಲಿನ ಡೀಲಿಂಗ್‌ಗೆ ಸಂಬಂಧಿಸಿದೆ ಎನ್ನಲಾದ ಡೈರಿಯೊಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳ ಕೈ ಸೇರಿದೆ.

ಆರೋಪಿಯೊಬ್ಬರಿಂದ ವಶಪಡಿಸಿಕೊಳ್ಳಲಾಗಿದೆ ಎನ್ನಲಾದ ಡೈರಿಯಲ್ಲಿ ೨೦೧೬ರಲ್ಲಿ ಮೋಟಾರ್ ವೆಹಿಕಲ್ ಇನ್ಸ್ಪೆಕ್ಟರ್ ಹುದ್ದೆಗೆ ಆಯ್ಕೆಯಾಗಿದ್ದ ಹರೀಶ್, ಗೋವರ್ಧನ್, ಮಂಜುನಾಥ್, ಪೂಜಾ, ಪದ್ಮಾವತಿ, ಅಶ್ವಿನ್, ಸಂಗಮೇಶ್ ಹಾಗೂ ಮೋಹನ್ ಕುಮಾರ್ ಅವರ ಹೆಸರುಗಳಿವೆ.

೨೦೧೬ರಲ್ಲಿ ಎಂವಿಐ ಹುದ್ದೆಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದರೂ, ವಿವಿಧ ಕಾನೂನು ತೊಡಕುಗಳ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆ ನ್ಯಾಯಾಲಯದ ಮೆಟ್ಟಿಲೇರಿತ್ತು. ಬಳಿಕ ೨೦೨೩ರಲ್ಲಿ ಹೈಕೋರ್ಟ್ ನೀಡಿದ ಆದೇಶದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಕರ್ತವ್ಯಕ್ಕೆ ಸೇರ್ಪಡೆಯಾಗಿದ್ದರು ಎನ್ನಲಾಗಿದೆ.

ಆ ಸಂದರ್ಭದಲ್ಲಿ ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾಗಿ ಕೃಷ್ಣ ಭಾಜಪೇಯಿ ಕಾರ್ಯನಿರ್ವಹಿಸಿದ್ದರು. ಇದೀಗ ಡೈರಿಯಲ್ಲಿ ಉಲ್ಲೇಖವಾಗಿರುವ ಹೆಸರುಗಳು ಮತ್ತು ನೇಮಕಾತಿ ಪ್ರಕ್ರಿಯೆಯ ನಡುವಿನ ಯಾವುದೇ ಸಂಬಂಧವಿದೆಯೇ ಎಂಬುದನ್ನು ಇಡಿ ಪರಿಶೀಲಿಸುತ್ತಿದೆ.

ಇದಕ್ಕೆ ಸಂಬಂಧಿಸಿದಂತೆ, ಡೈರಿಯಲ್ಲಿ ಹೆಸರುಗಳಿರುವ ಎಂವಿಐಗಳು ತಮಗೂ ಆರೋಪಿಯಾಗಿರುವ ವ್ಯಕ್ತಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಡೈರಿಯಲ್ಲಿ ಹೆಸರು ಉಲ್ಲೇಖವಾಗಿರುವುದೇ ಅಕ್ರಮ ವ್ಯವಹಾರದಲ್ಲಿ ಭಾಗಿಯಾಗಿರುವುದಕ್ಕೆ ಪುರಾವೆಯಲ್ಲ ಎಂಬುದನ್ನೂ ತನಿಖೆಯ ಸಂದರ್ಭದಲ್ಲಿ ಪರಿಗಣಿಸಬೇಕಿದೆ.

ಡೈರಿಯಲ್ಲಿರುವ ಮಾಹಿತಿಯ ಸತ್ಯಾಸತ್ಯತೆ, ಹಣಕಾಸಿನ ವ್ಯವಹಾರಗಳ ವಿವರ ಹಾಗೂ ನೇಮಕಾತಿ ಪ್ರಕ್ರಿಯೆಯೊಂದಿಗೆ ಅದರ ಸಂಬಂಧದ ಕುರಿತು ಇಡಿ ತನಿಖೆಯಿಂದ ಮತ್ತಷ್ಟು ಮಾಹಿತಿ ಹೊರಬರಬೇಕಿದೆ.

Share with Friends
author avatar
Digital Desk