Health | ಆರೋಗ್ಯLatestTop Storiesಬೆಂಗಳೂರು-Bengaluru

ಬಿಡದಿಯಲ್ಲಿ ನಕಲಿ ಔಷಧಿ ದಂಧೆ: ಎಸ್‌ಐಟಿ ತನಿಖೆ ತೀವ್ರ

ಬೆಂಗಳೂರು.ಅ.1- ಬಿಡದಿಯಲ್ಲಿ ನಡೆದಿರುವ ನಕಲಿ ಔಷಧಿ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಪ್ರಕರಣದ ಕಿಂಗ್‌ಪಿನ್ ಎಂದು ಆರೋಪಿಸಲಾಗಿರುವ ಪ್ರಶಾಂತ್‌ನನ್ನು ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಅಸಲಿ ಔಷಧಿಗಳ ಜೊತೆ ನಕಲಿ ಔಷಧಿಗಳನ್ನು ಮಿಶ್ರಣ ಮಾಡಿ ಪೂರೈಕೆ ಮಾಡಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಅಸಲಿ ಔಷಧಿ ಯಾವುದು,ನಕಲಿ ಔಷಧಿ ಯಾವುದು ಎಂಬುದನ್ನು ಗುರುತಿಸುವುದು ಕಷ್ಟವಾಗುತ್ತಿತ್ತು.

ಪ್ರಕರಣದ ತನಿಖೆಯಲ್ಲಿ ಆರೋಪಿಗಳು ಪ್ರಮುಖವಾಗಿ ಎರಡು ಔಷಧಿಗಳನ್ನು ನಕಲು ಮಾಡುತ್ತಿದ್ದರು ಎಂಬ ಮಾಹಿತಿ ಎಸ್‌ಐಟಿಗೆ ಲಭ್ಯವಾಗಿದೆ. ಇವು ಆಂಟಿಬಯೋಟಿಕ್ ಔಷಧಿಗಳಾಗಿದ್ದು, ಕ್ಯಾನ್ಸರ್ ಚಿಕಿತ್ಸೆಯ ಜೊತೆಗೆ ಇತರ ಚಿಕಿತ್ಸೆಗಳಲ್ಲೂ ಬಳಸಲಾಗುತ್ತಿತ್ತು.

ಈ ನಕಲಿ ಔಷಧಿಗಳಿಗಾಗಿ ಬಳಸಲಾಗುತ್ತಿದ್ದ ಲೇಬಲ್‌ಗಳು ಹಾಗೂ ಬಾಟಲ್‌ಗಳನ್ನು ಟರ್ಕಿಯಲ್ಲಿ ತಯಾರಿಸಲಾಗುತ್ತಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಪ್ರತಿಯೊಂದು ಲೇಬಲ್‌ನಲ್ಲೂ ಪ್ರತ್ಯೇಕ ಸ್ಕ್ಯಾನರ್ ಅಳವಡಿಸಲಾಗುತ್ತಿತ್ತು ಎನ್ನಲಾಗಿದೆ. ಇದರಿಂದ ಔಷಧಿಯನ್ನು ನಕಲು ಮಾಡಿದರೂ ಲೇಬಲ್ ಅನ್ನು ನಕಲು ಮಾಡುವುದು ಕಷ್ಟವಾಗುತ್ತಿತ್ತು.

ಹೀಗಾಗಿ ಲೇಬಲ್ ಹಾಗೂ ಬಾಟಲ್‌ಗಳನ್ನು ಟರ್ಕಿಯಿಂದಲೇ ತರಿಸಿಕೊಳ್ಳಬೇಕಾಗಿತ್ತು.ಇದಕ್ಕಾಗಿ ಪ್ರಶಾಂತ್ ಅಜರ್‌ಬೈಜಾನ್‌ನಲ್ಲಿ ಡೀಲರ್‌ಗಳನ್ನು ಸಂಪರ್ಕಿಸಿದ್ದ ಎಂದು ಆರೋಪಿಸಲಾಗಿದೆ. ಟರ್ಕಿಯಿಂದ ಲೇಬಲ್ ಹಾಗೂ ಬಾಟಲ್ ತರಿಸಿಕೊಡುತ್ತಿದ್ದ ಡೀಲರ್‌ಗಳನ್ನು ಈ ಮೂಲಕ ಸಂಪರ್ಕಿಸಲಾಗುತ್ತಿತ್ತು. ಈ ಸಂಬಂಧ ಪ್ರಶಾಂತ್ ಅಜರ್‌ಬೈಜಾನ್‌ಗೆ ತೆರಳಿದ್ದ ಎಂಬ ಮಾಹಿತಿಯೂ ತನಿಖೆಯಲ್ಲಿ ಹೊರಬಂದಿದೆ.

ಇದುವರೆಗೆ ಸುಮಾರು ೧೫ ಕೋಟಿಗೂ ಅಧಿಕ ಮೌಲ್ಯದ ನಕಲಿ ಔಷಧಿ ತಯಾರಿಸಿರುವುದು ಪತ್ತೆಯಾಗಿದೆ. ಪ್ರಕರಣದ ವ್ಯಾಪ್ತಿಯನ್ನು ಪತ್ತೆಹಚ್ಚಲು ಎಸ್‌ಐಟಿ ಅಧಿಕಾರಿಗಳು ಇದೀಗ ಆಡಿಟಿಂಗ್ ಆರಂಭಿಸಿದ್ದಾರೆ.

ನಕಲಿ ಔಷಧಿಗಳು ಯಾರಿಗೆಲ್ಲ ಪೂರೈಕೆಯಾಗಿದ್ದವು?ಯಾವೆಲ್ಲ ಪ್ರದೇಶಗಳಿಗೆ ತಲುಪಿವೆ?ಅವುಗಳ ಬಳಕೆಯಿಂದ ಎಷ್ಟು ಮಂದಿ ಮೃತಪಟ್ಟಿದ್ದಾರೆ ಅಥವಾ ಆರೋಗ್ಯದ ಮೇಲೆ ಪರಿಣಾಮ ಬೀರಿದೆ?ಎಂಬುದರ ಕುರಿತು ಎಸ್‌ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಈಗಾಗಲೇ ಏಳು ರಾಜ್ಯಗಳಲ್ಲಿ ಎಸ್‌ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.ನಕಲಿ ಔಷಧಿ ಜಾಲದ ಸಂಪೂರ್ಣ ವ್ಯಾಪ್ತಿ ಹಾಗೂ ಪೂರೈಕೆ ಸರಪಳಿಯನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.

Share with Friends
author avatar
Digital Desk