
ಬರ ಪರಿಹಾರ : ಪ್ರತಿ ಎಕರೆಗೆ 25 ಸಾವಿರ ಬಿಡುಗಡೆಗೆ ಆಗ್ರಹ
ಬೆಂಗಳೂರು.ಸೆ.30– ರಾಜ್ಯದಲ್ಲಿ 200ಕ್ಕೂ ಹೆಚ್ಚು ತಾಲ್ಲೂಕುಗಳು ಬರಪೀಡಿತವಾಗಿವೆ. ರೈತರು ಸಂಕಷ್ಟದಲ್ಲಿದ್ದು, ವಲಸೆ ಹೋಗುವ ಪರಿಸ್ಥಿತಿ ಎದುರಾಗಿದೆ. ಸರ್ಕಾರ ರೈತರಿಗೆ ಸೂಕ್ತ ಪರಿಹಾರ ನೀಡುತ್ತಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬರ ಪರಿಹಾರವಾಗಿ ಪ್ರತಿ ಎಕರೆಗೆ 25 ಸಾವಿರ ನೀಡಬೇಕು ಎಂದು ವಿಧಾನಸಭೆಯಲ್ಲಿ ಒತ್ತಾಯಿಸಿದ್ದೆವು.ವಲಸೆ ಹೋಗುವುದನ್ನು ತಡೆಯಲು ಉದ್ಯೋಗ ಕಲ್ಪಿಸಬೇಕು ಎಂದು ಹೇಳಿದ್ದೆವು. ಆದರೆ ಸರ್ಕಾರ 2,500 ನೀಡಿ ಕೈತೊಳೆದುಕೊಳ್ಳುತ್ತಿದೆ ಎಂದು ಅಶೋಕ್ ಟೀಕಿಸಿದರು.
ಕಾವೇರಿ ಜಲಾಶಯ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ.ಕುಡಿಯುವ ನೀರಿಗೆ ಅಗತ್ಯ ಹಣವನ್ನು ಸರ್ಕಾರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.ರೈತರ ಆತ್ಮಹತ್ಯೆ ಪ್ರಕರಣಗಳ ಕುರಿತು ಮಾತನಾಡಿದ ಅಶೋಕ್,ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 3 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿದರು. ಅಲ್ಲದೆ,ಮಂಡ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳನ್ನೂ ಅವರು ಪ್ರಸ್ತಾಪಿಸಿದರು.
ಬರ ಪರಿಹಾರ ಹಾಗೂ ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.ಬರ ಪರಿಸ್ಥಿತಿ ಕುರಿತು ಸರ್ವಪಕ್ಷ ನಿಯೋಗ ಕರೆದೊಯ್ಯುವ ಬಗ್ಗೆ ನಮ್ಮೊಂದಿಗೆ ಚರ್ಚಿಸಿಲ್ಲ. ಕೇಂದ್ರಕ್ಕೆ ಮೆಮೋರಾಂಡA ಕಳುಹಿಸುವ ಮುನ್ನವೂ ನಮ್ಮನ್ನು ಕೇಳಿಲ್ಲ. ಎಲ್ಲವನ್ನೂ ಮಾಡಿ ಈಗ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬಾರದು ಎಂದು ಅವರು ಹೇಳಿದರು.
ಬರ ಪರಿಹಾರ ವಿಚಾರದಲ್ಲಿ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ ಎನ್ಡಿಎ ನಾಯಕರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಅಶೋಕ್ ತಿಳಿಸಿದರು.ರಾಜ್ಯದ ಹಣಕಾಸು ನಿರ್ವಹಣೆ ಕುರಿತೂ ಸರ್ಕಾರದ ವಿರುದ್ಧ ಅಶೋಕ್ ಆರೋಪಗಳನ್ನು ಮಾಡಿದರು.ಸರ್ಕಾರದ ಖಜಾನೆ ಮೇಲೆ ಹಣಕಾಸಿನ ಒತ್ತಡ ಹೆಚ್ಚಾಗಿದೆ.
ಮತ್ತಷ್ಟು ಸಾಲ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ಹೇಳಿದರು.ಹಿಂದಿನ ಮುಖ್ಯಮಂತ್ರಿಗಳ ಅವಧಿಯಲ್ಲಿ ಪಡೆದ ಸಾಲದ ಅಂಕಿಅAಶಗಳನ್ನು ಉಲ್ಲೇಖಿಸಿದ ಅಶೋಕ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ರಾಜ್ಯದ ಸಾಲದ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳ ಅವಧಿಯ ಸಾಲದ ಪ್ರಮಾಣವನ್ನೂ ಹೋಲಿಕೆ ಮಾಡಿದರು.
ರಾಜ್ಯದಲ್ಲಿ ಗುತ್ತಿಗೆದಾರರಿಗೆ ಸುಮಾರು 38 ಸಾವಿರ ಕೋಟಿ ಬಾಕಿ ಉಳಿದಿದೆ ಎಂದು ಅಶೋಕ್ ಆರೋಪಿಸಿದರು.
ಗುತ್ತಿಗೆದಾರರು ಬಾಕಿ ಹಣ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಎಲ್ಲದಕ್ಕೂ ಲಂಚ ನೀಡಬೇಕಾದ ಪರಿಸ್ಥಿತಿ ಇದೆ ಎಂದು ಅವರು ಆರೋಪಿಸಿದ್ದಾರೆ. ಗುತ್ತಿಗೆದಾರರ ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡಲಿದೆ ಎಂದು ಅವರು ಹೇಳಿದರು.ಇದಲ್ಲದೆ,ರೈತರಿಂದ ಖರೀದಿಸಿದ ರಾಗಿಗೆ 265 ಕೋಟಿ ಬಾಕಿ ಇದೆ ಎಂದೂ ಅವರು ಆರೋಪಿಸಿದರು.ಕೊಪ್ಪಳದಲ್ಲಿ ಎಂಜಿನಿಯರ್ ಫರ್ವೇಜ್ ನಾಪತ್ತೆಯಾಗಿರುವ ಪ್ರಕರಣವನ್ನೂ ಅಶೋಕ್ ಪ್ರಸ್ತಾಪಿಸಿದರು. ಅನುದಾನ ಬಿಡುಗಡೆಗೆ ಪತ್ರ ಬರೆದಿದ್ದರೂ ಹಣ ಬಿಡುಗಡೆಯಾಗಿಲ್ಲ.
ಪಾವತಿ ವಿಚಾರದಲ್ಲಿ ಒತ್ತಡ ಎದುರಿಸುತ್ತಿದ್ದೇನೆ ಎಂದು ಅವರು ಹೇಳಿಕೊಂಡಿದ್ದರು. ಈ ಪ್ರಕರಣದಲ್ಲಿ ಅಧಿಕಾರಿಯು ಬರೆದಿದ್ದಾನೆ ಎನ್ನಲಾದ ಡೆತ್ನೋಟ್ ಕುರಿತು ತನಿಖೆ ನಡೆಯಬೇಕಿದ್ದು, ಪ್ರಕರಣದ ಸಂಪೂರ್ಣ ವಾಸ್ತವಾಂಶ ತನಿಖೆಯಿಂದಷ್ಟೇ ಸ್ಪಷ್ಟವಾಗಲಿದೆ ಎಂದು ಹೇಳಿದರು.
ಸರ್ಕಾರದ ಹಣಕಾಸು ನಿರ್ವಹಣೆಯ ವೈಫಲ್ಯದಿಂದಾಗಿ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಶೋಕ್ ಆರೋಪಿಸಿದರು.
ಸರ್ಕಾರ ರೈತರಿಗೆ ಮೋಸ ಮಾಡಿದೆ. ಈ ವಿಚಾರವನ್ನು ಜನತಾ ನ್ಯಾಯಾಲಯದ ಮುಂದೆ ಕೊಂಡೊಯ್ಯುತ್ತೇವೆ. ರೈತರಿಗೆ 25 ಸಾವಿರ ಪರಿಹಾರ ನೀಡಬೇಕು ಮತ್ತು ಕುಡಿಯುವ ನೀರಿಗೆ ಅಗತ್ಯ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
